Friday 16 March 2012

ನೀವು ಕೂಡಾ ಲೈಂಗಿಕ ಆಪ್ತ ಸಮಾಲೋಚಕರಾಗಬಹುದು...


Posted by Picasa



ಆಧುನಿಕ ಬದುಕು ಸಂಕೀರ್ಣತೆಯಿಂದ ಕೂಡಿದೆ. ಹಣ, ಅಂತಸ್ತು ಮತ್ತು ಖ್ಯಾತಿಯ ಹಿಂದೆ ಓಡುತ್ತಿರುವ ಪ್ರತಿಯೊಬ್ಬನ ಬದುಕೂ ಸದಾ ಒತ್ತಡದಿಂದ ಕೂಡಿರುತ್ತದೆ. ಒತ್ತಡ ಮೈ-ಮನಗಳನ್ನು ದಣಿಸುತ್ತದೆ. ನಮ್ಮ ದೈನಂದಿನ ಬದುಕಿನ ಹಲವು ಚಟುವಟಿಕೆಗಳಲ್ಲಿ ನಾವು ಮೈ ಬೇರೆ, ಮನಸೇ ಬೇರೆ ಎಂಬಂತೆ ಬದುಕುತ್ತಿರುತ್ತೇವೆ. ಆದರೆ, ಮೈ ಮತ್ತು ಮನಸು ಒಂದಾಗಿ, ಅದರಲ್ಲೂ ಎರಡು ಮೈ-ಮನಸುಗಳು ಏಕೀಭಾವದಿಂದ ಸ್ಪಂದಿಸಬೇಕಾಗಿದೆ.

ರೂಡಿಯಲ್ಲಿ ನಾವು ಆರೋಗ್ಯ ಭಾಗ್ಯ ಎನ್ನುತ್ತೇವೆ. ಹಾಗಾದರೆ ಆರೋಗ್ಯ ಎಂದರೇನು? ರೋಗರಹಿತವಾದ ದೇಹಕ್ಕೆ ಆರೋಗ್ಯವಂತ ಶರೀರ ಎನ್ನುತ್ತೇವೆ. ಅದಷ್ಟೇ ಆರೋಗ್ಯವೇ? ಅಲ್ಲ. ಆರೋಗ್ಯದಲ್ಲಿ ಮೂರು ವಿಧ. ದೈಹಿಕ ಅರೋಗ್ಯ, ಮಾನಸಿಕ ಆರೋಗ್ಯ. ಮತ್ತು ಲೈಂಗಿಕ ಆರೋಗ್ಯ. ದೈಕ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಸಾಮಾನ್ಯವಾಗಿ ಎಲ್ಲರೂ ವೈಧ್ಯರ ಬಳಿ ಹೋಗುತ್ತಾರೆ. ಜ್ವರ, ನೆಗಡಿ, ತಲೆನೋವು, ಆಯಾಸ ಮುಓತಾದ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಬಳಿ ಧಾವಿಸುತ್ತಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಹಾಗೆಯೇ ಳಿನ್ನತೆ, ಉನ್ಮಾದದಂಥ ಮಾನಸಿಕ ಏರಿಳಿತಗಳು ಉಂಟಾದಾಗ ತಡವಾಗಿಯಾದರೂ ಮಾನಸಿಕ ತಜ್ನರನ್ನು ಭೇಟಿಯಾಗುತ್ತಾರೆ. ಆದರೆ ಲೈಂಗಿಕ ಸಮಸ್ಯೆಗಳು ತಲೆದೋರಿದಾಗ ಅದನ್ನು ಸಾಧ್ಯವಾದಷ್ಟು ಮುಚ್ಚಿಟ್ಟುಕೊಳ್ಳಲು ನೋಡುತ್ತಾರೆ. ಇದಕ್ಕೆ ಕಾರಣ ನಮ್ಮ ಸಮಾಜದಲ್ಲಿ ಲೈಂಗಿಕತೆ ಬಗ್ಗೆ ಇರುವ ಮಡಿವಂತಿಕೆ.

ಇದನ್ನೆಲ್ಲಾ ಮನಗಂಡ ’ಕರ್ನಾಟಕ ಲೈಂಗಿಕ ಆರೋಗ್ಯ ಶಿಕ್ಷಕರು ಮತ್ತು ಆಪ್ತ ಸಲಹೆಗಾರರ ವೇದಿಕೆ’ಯು ಆಸಕರಿಗಾಗಿ ಲೈಂಗಿಕ ತರಬೇತಿ ಕೋರ್ಸ್ ಅನ್ನು ಆರಂಭಿಸಿದೆ. ಲೈಂಗಿಕ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ತಜ್ನ ವೈದ್ಯರು ಮತ್ತು ಪರಿಣತರು ಮಾರ್ಗದರ್ಶನ ಮಾಡುತ್ತಾರೆ.

ಲೈಂಗಿಕ ವಿಜ್ನಾನ ಕ್ಷೇತ್ರದಲ್ಲಿ ಎನ್ ವಿಶ್ವರೂಪಾಚಾರ್ ಅವರದು ದೊಡ್ಡ ಹೆಸರು.ಜನಸಾಮಾನ್ಯರಲ್ಲಿ ಆರೋಗ್ಯಕರ ಲೈಂಗಿಕ ಚಿಂತನೆಯನ್ನು ಮೂಡಿಸುವುದಕ್ಕಾಗಿ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ಕಳೆದ ನಾಲ್ಕು ದಶಕಗಳಿಂದಲೂ ವಿವಿಧ ಪತ್ರಿಕೆಗಳಲ್ಲಿ ಲೈಂಗಿಕತೆ ಕುರಿತಂತೆ ಲೇಖನಗಳನ್ನು ಬರೆಯುತ್ತಿದ್ದಾರೆ. ಅವರ ನೇತೃತ್ವದಲ್ಲಿ ಈ ತರಬೇತಿ ಕೋರ್ಸ್ ನಡೆಯುತ್ತಿದೆ.

ನಿಮ್ಮಲ್ಲಿ ಯಾರಿಗಾದರೂ ತರಬೇತಿ ಪಡೆಯಲು ಅಸಕ್ತಿಯಿದ್ದಲ್ಲಿ ವಿಶ್ವರೂಪಾಚಾರ್ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ ೯೭೩೧೩೧೪೩೪೮.
ನಾಡಿದ್ದು ಭಾನುವಾರ [ಮಾರ್ಚ್ ೨೫ ] ದಿಂದ ರೆಗ್ಯೂಲರ್ ಕ್ಲಾಸ್ ಗಳು ಆರಂಭವಾಗುತ್ತವೆ. ಪ್ರತಿ ಭಾನುವಾರ ಮಧ್ಯಾಹ್ನ ೧ರಿಂದ ೪ ಘಂಟೆಗಳ ಕಾಲ ತರಗತಿಗಳಿರುತ್ತವೆ. ನೀವು ಕೊಡುವ ಶುಲ್ಕಕ್ಕಿಂತಲೂ ದುಪ್ಪಟ್ಟು ಬೆಲೆಯ ಅಮೂಲ್ಯ ಪುಸ್ತಕಗಳು ನಿಮ್ಮ ಪೂರಕ ಓದಿಗೆ ಕೊಡುಗೆಯಾಗಿ ನಿಮಗೇ ದೊರೆಯುತ್ತದೆ.

 ’ದಾಂಪತ್ಯ ವೈದ್ಯ ಶಾಸ್ತ್ರ’ ಎಂಬ ಅಮೂಲ್ಯ ಮಾಹಿತಿಪೂರ್ಣ ಪುಸ್ತಕವನ್ನು ಬರೆದ ಮನೋವೈದ್ಯರೂ, ಪ್ರಖ್ಯಾತ ಲೈಂಗಿಕ ಶಾಸ್ತ್ರಜ್ನರೂ ಆದ ಡಾ.ಟಿ.ಎಸ್. ಸತ್ಯನಾರಾಯಣ ಅವರಿಂದ ಕಳೆದ ಬ್ಯಾಚಿನವರಿಗಾಗಿ ಏರ್ಪಡಿಸಿದ power point presentation ನ ಕೆಲವು ಚಿತ್ರಗಳನ್ನು ನಿಮ್ಮ ಅವಗಾಹನೆಗಾಗಿ ಇಲ್ಲಿ ಹಾಕಿದ್ದೇನೆ.

ನಿಮ್ಮಲ್ಲಿ ಅನೇಕರಿಗೆ  ಸ್ತ್ರೀ ಮುಟ್ಟಾದ ಸಮಯದಲ್ಲಿ ಸಂಭೋಗ ಮಾಡಬಹುದೇ ಎಂಬುದಾಗಿ ಸಂಶಯಗಳಿವೆಯೆಂಬುದು ನಿಮ್ಮ ಮೈಲ್ ನಿಂದ ಗೊತ್ತಾಗಿದೆ. ಅದನ್ನು ನಾನು ಸತ್ಯ ನಾರಾಯಣ ಅವರಲ್ಲಿ ಹೇಳಿದೆ. ಅದಕ್ಕವರು, ಮಾಡಬಹುದು. ಆದರೆ ಶುಚಿತ್ವದ ಬಗ್ಗೆ ಗಮನವಿರಲಿ. ಕಾಂಡೊಮ್ ಉಪಯೋಗಿಸಿದರೆ ಒಳ್ಳೆಯದು. ಮುಖ್ಯವಾಗಿ ಪರಸ್ಪರ ಒಪ್ಪಿಗೆ ಮತ್ತು ಹೊಂದಾಣಿಕೆ ಮುಖ್ಯ. ಏಕೆಂದರೆ ಆ ಸಮಯದಲ್ಲಿ ಹೆಣ್ಣಿನ ಮನಸ್ಸು ಸೂಕ್ಷ್ಮವಾಗಿರುತ್ತೆ, ಎಂದು ಹೇಳಿದ್ದಾರೆ.

Saturday 26 November 2011

ಲೈಂಗಿಕ ಕ್ರಿಯಾ ಕೌಶಲ್ಯಗಳು




ನಾಳೆ ಅಂದರೆ ನವೆಂಬರ್ ೨೭ರಂದು ಬೆಳಿಗ್ಗೆ  ಹತ್ತೂವರೆಗೆ ಮೈಸೂರು ರಸ್ತೆಯ ನಾಯಂಡ ಹಳ್ಳಿಯಲ್ಲಿರುವ ’ಸ್ಪಂದನ’ ಆಸ್ಪತ್ರೆ ಆವರಣದಲ್ಲಿ ’ಲೈಂಗಿಕ ಕ್ರಿಯಾ ಕೌಶಲ್ಯಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಹಿರಿಯ ವೈದ್ಯ ಸಾಹಿತಿ ಡಾ. ವಸಂತ ಅ.ಕುಲಕರ್ಣಿ, ಎಂ.ಡಿಯವರು ಉಪನ್ಯಾಸವನ್ನು ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಡಾ. ಬಿ.ಜಿ ಚಂದ್ರಶೇಖರ್,ಎಂ.ಡಿಯವರು ಬರೆದ’ ಲೈಂಗಿಕ ವೈದ್ಯಶಾಸ್ತ್ರ ಮತ್ತು ಎನ್.ವಿಶ್ವರೂಪಾಚಾರ್ ಬರೆದ ಸೆಕ್ಸ್ ಅಂಡ್ ಕೈಮ್ ಹಾಗು ’ದಂಪತಿಗಾಗಿ ಕಾಮೋತ್ತೇಜಕಗಳು ಎಂಬ ಪುಸ್ತಕಗಳು ಬಿಡುಗಡೆಗೊಳ್ಳಲಿವೆ.

ಕರ್ನಾಟಕ ಲೈಂಗಿಕ ಆರೋಗ್ಯ ಶಿಕ್ಷಕರು ಮತ್ತು ಆಪ್ತ ಸಲಹೆಗಾರರ ವೇದಿಕೆ ಈ ಉಪನ್ಯಾಸ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಈ ವೇದಿಕೆಯು ಏರ್ಪಡಿಸುತ್ತಿರುವ ಚೊಚ್ಚಲ ಕಾರ್ಯಕ್ರಮವಿದು.  ಇದೇ ವರ್ಷ ಅಗಸ್ಟ್ ೧೪ ರಂದು ಈ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕದ ವೈದ್ಯಕೀಯ ಇತಿಹಾಸದಲ್ಲೇ ಇದು ಹೊಸ ಪ್ರಯೋಗ.
ಆಪ್ತ ಸಲಹೆಗಾರರು [counselors] ಈಗ ಎಲ್ಲಾ ಕ್ಷೇತ್ರಗಳಲ್ಲೂ ಇದ್ದಾರೆ. ಆದರೆ ಲೈಂಗಿಕ ಕ್ಷೇತ್ರದಲ್ಲಿ ಅವರ ಕೊರತೆಯಿತ್ತು. ಹಾಗೆ ನೋಡಿದರೆ ಆಪ್ತ ಸಲಹೆಯ ಸೇವೆ ಈ ಕ್ಷೇತ್ರಕ್ಕೆ ಹೆಚ್ಚಾಗಿ ಬೇಕಾಗಿತ್ತು. ಯಾಕೆಂದರೆ ಸೆಕ್ಸ್ ಎನ್ನುವುದೇ ಮನಸ್ಸಿಗೆ ಸಂಬಂಧಪಟ್ಟದ್ದು. ಅದನ್ನು ಮನೋವಿಜ್ನಾನಿ ಪ್ರಾಯ್ಡ್ ಒತ್ತಿ ಹೇಳಿದ್ದಾನೆ.

ರೂಢಿಯಲ್ಲಿ ನಾವು ಆರೋಗ್ಯವೇ ಭಾಗ್ಯ ಅನ್ನುತ್ತೇವೆ. ಹಾಗಾದರೆ ಆರೋಗ್ಯ ಅಂದರೇನು? ರೋಗರಹಿತವಾದ ದೇಹಕ್ಕೆ ನಾವು ಆರೋಗ್ಯದಲ್ಲಿ ಶರೀರ ಎನ್ನುತ್ತೇವೆ. ಅದಷ್ಟೇ ಆರೋಗ್ಯವೇ? ಅಲ್ಲ. ಆರೋಗ್ಯದಲ್ಲಿ ಮೂರು ವಿಧ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಲೈಂಗಿಕ ಆರೋಗ್ಯ. ದೈಹಿಕ ಆರೋಗ್ಯದಲ್ಲಿ ಏರುಪೇರು ಉಂಟಾದಾಗ, ಜ್ವರ, ನೆಗಡಿ, ತಲೆನೋವು, ಆಯಾಸ ಮುಂತಾದ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಬಳಿ ಹೋಗುತ್ತಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಹಾಗೆಯೇ ಖಿನ್ನತೆ, ಉನ್ಮಾದದಂಥ ಮಾನಸಿಕ ಏರಿಳಿತಗಳು ಉಂಟಾದಾಗ ತಡವಾಗಿಯಾದರೂ ಮಾನಸಿಕ ತಜ್ನರನ್ನು ಭೇಟಿಯಾಗುತ್ತಾರೆ. ಆದರೆ ಲೈಂಗಿಕ ಸಮಸ್ಯೆಗಳು ತಲೆದೊರಿದಾಗ ಅದನ್ನು ಸಾಧ್ಯವಾದಷ್ಟು ಮುಚ್ಚಿಟ್ಟುಕೊಳ್ಳಲು ನೋಡುತ್ತಾರೆ.ಇದಕ್ಕೆ ಕಾರಣ ನಮ್ಮ ಸಮಾಜದಲ್ಲಿ ಲೈಂಗಿಕತೆ ಬಗ್ಗೆ ಇರುವ ಮಡಿವಂತಿಕೆ.

ಇದನ್ನೆಲ್ಲಾ ಮನಗಂಡ ವೈದಕೀಯ ಕ್ಷೇತ್ರದ ಲೈಂಗಿಕ ತಜ್ನರ ತಂಡವೊಂದು, ವಿವಿಧ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡ ಅಸಕ್ತರ ತಂಡವೊಂದಕ್ಕೆ ಲೈಂಗಿಕ ಆಪ್ತ ಸಮಾಲೋಚನೆಯ ಬಗ್ಗೆ ತರಬೇತಿಯನ್ನು ನೀಡಿತು. ಆ ತಂಡವೀಗ ತನ್ನ ಮೊದಲ ಕಾರ್ಯಕ್ರಮವನ್ನು ನಾಳೆ ನಡೆಸುತ್ತಲಿದೆ.
ಸಾಧ್ಯವಾದರೆ ನೀವು ಸಹಾ ಭಾಗವಹಿಸಿ.


Friday 30 September 2011


 


                       

                                       
     ಲೈಂಗಿಕ ಆಪ್ತ ಸಮಾಲೋಚನೆ ಹಾಗೆಂದರೇನು?                   

                                                                              

.ಲೈಂಗಿಕ ಶಿಕ್ಷಣ ಎಂದರೇನು?

ಉ; ಲೈಂಗಿಕ ಶಿಕ್ಷಣದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಲೈಂಗಿಕ ಅಂಗಾಂಗಳ ಬಗ್ಗೆ ಮತ್ತು ಅದರ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳುವಳಿಕೆಯನ್ನು ಕೊಡುವುದು.
ಲೈಂಗಿಕತೆ ಬಗ್ಗೆ ಹಲವು ಮಿಥ್ಯೆಗಳು ಜನರಲ್ಲಿ ಮನೆ ಮಾಡಿಕೊಂಡಿದೆ. ಲೈಂಗಿಕತೆ ಎಂದರೆ ಸಂಬೋಗ ಮಾತ್ರಾ ಎಂದು ತಿಳಿದುಕೊಂಡವರಿದ್ದಾರೆ. ಆದರೆ ಅದಷ್ಟೇ ಅಲ್ಲ. ಲೈಂಗಿಕತೆ ಎಂಬುದು ನಮ್ಮ ವ್ಯಕ್ತಿತ್ವದ ದ್ಯೋತಕ
ನಮಗೆ ನಮ್ಮ ಪಂಚೇಂದ್ರಿಯಗಳು ಕೆಲಸ ಮಾಡುವ ವಿಧಾನ ಗೊತ್ತಿದೆ. ಅದನ್ನು ನಾವು ಮುಕ್ತವಾಗಿ ವಿವರಿಸುತ್ತೇವೆ. ಆದರೆ ಲೈಂಗಿಕಾಂಗಗಳು ಕೆಲಸ್ ಮಾಡುವ ವಿಧಾನಗಳು ಪೂರ್ತಿಯಾಗಿ ಗೊತ್ತಿಲ್ಲ. ಅದನ್ನು ವಿವರಿಸಲು ಮುಜುಗುರ ಪಡುತ್ತೇವೆ. ಅದರಿಂದಾಗಿ ಅನೇಕ ಮಾನಸಿಕ ಮತ್ತು ಸಾಮಾಜಿಕ ತೊಂದರೆಗಳು ಉಂಟಾಗುತ್ತಿವೆ. ಅದರಿಂದಾಗಿ ಪ್ರತಿಯೊಬ್ಬ ಮನುಷ್ಯನಿಗೂ ಲೈಂಗಿಕ ಅರಿವು ಇರಬೇಕು.ಅದಕ್ಕಾಗಿ ಲೈಂಗಿಕ ಶಿಕ್ಷಣ ನೀಡುವುದರ ಬಗ್ಗೆ ಇತ್ತೀಚೆಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿದೆ.

.ಲೈಂಗಿಕ ಪರ್ವ ಕಾಲ ಯಾವುದು? ಸಂಕ್ಷಿಪ್ತವಾಗಿ ತಿಳಿಸಿ.

ಹರೆಯ ಲೈಂಗಿಕ ಪರಿಪಕ್ವತೆಯ ಪರ್ವಕಾಲ ಹೆಣ್ಣು ಮಕ್ಕಳಲ್ಲಿ ಇದು ಹನ್ನೊಂದು ವರ್ಷದಿಂದ ಆರಂಭವಾಗಿ ಹದಿನೈದರ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಆಕೆ ಮೈನೆರೆಯುತ್ತಾಳೆ. ಅಂದರೆ ಪ್ರಥಮ ಮುಟ್ಟು ಕಾಣಿಸಿಕೊಳ್ಳುತ್ತದೆ. ದೈಹಿಕ ಬೆಳವಣಿಗೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸ್ತನಗಳ ಬೆಳವಣಿಗೆ ಗೋಚರಿಸುತ್ತದೆ. ಗುಪ್ತಾಂಗಗಳಲ್ಲಿ ಕೂದಲು ಬೆಳೆಯುತ್ತದೆ. ಧ್ವನಿ ಮೃದುವಾಗುತ್ತದೆ. ಸ್ವಭಾವದಲ್ಲಿ ನಾಚಿಕೆ ಕಾಣಿಸಿಕೊಳ್ಳುತ್ತದೆ.
ಗಂಡು ಮಕ್ಕಳ ಲೈಂಗಿಕ ಪರ್ವ ಕಾಲವನ್ನು ೧೩ರಿಂದ ೧೭ ವರ್ಷಗಳೆಂದು ಗುರುತಿಸಲಾಗಿದೆ. ಈ ಅವಧಿಯಲ್ಲಿ ಗಂಡು ಮಕ್ಕಳಲ್ಲಿ  ಸ್ವಪ್ನ ಸ್ಖಲನ ಆರಂಭವಾಗುತ್ತದೆ. ದೈಹಿಕ ಬದಲಾವಣೆಗಳು ಗೋಚರಿಸುತ್ತವೆ. ಧ್ವನಿ ಗಡುಸಾಗುತ್ತದೆ. ಚಿಗುರು ಮೀಸೆ ಕಾಣಿಸಿಕೊಳ್ಳುತ್ತದೆ. ಗುಪ್ತಾಂಗಗಳಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಮಾಂಸಖಂಡಗಳು ಗಡುಸಾಗುತ್ತದೆ. ಮಾನಸಿಕವಾಗಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಮನದಲ್ಲಿ ಲೈಂಗಿಕ ಭಾವನೆಗಳು ಸುಳಿದಾಡುತ್ತವೆ.

ಪುರುಷ ಜನನೇಂದ್ರಿಯಗಳು ಯಾವುವು? ಚಿತ್ರ ಸಮೇತ ವಿವರಿಸಿ.

ಪುರುಷರಲ್ಲಿರುವ ಜನನೇಂದ್ರಿಯಗಳನ್ನು ಹೊರ ಹಾಗೂ ಒಳ ಜನನೇಂದ್ರಿಯಗಳೆಂದು ವಿಂಗಡಿಸಬಹುದು. ಕಣ್ಣಿಗೆ ಗೋಚರವಾಗುವ ಶಿಶ್ನ [Penis ] ಹಾಗು ವೃಷಣ ಚೀಲಗಳು [Scrotum ] ಹೊರ ಜನನೇಂದ್ರಿಯಗಳು.
ಮುನ್ನಿಲು ಗ್ರಂಥಿ [ prostate], ರೇತು ಗ್ರಂಥಿ ಅಥವಾ ವೃಷಣಗಳು [ Testes ], ರೇತು ಕಿಗ್ಗೋಶ  ಮುಂತಾದವುಗಳನ್ನು ಒಳ ಜನನೇಂದ್ರಿಯಗಳೆಂದು ಕರೆಯುತ್ತಾರೆ.

.ವೃಷಣಗಳ [testes] ಕಾರ್ಯವೇನು?  ಚಿತ್ರ ಸಮೇತ ವಿವರಿಸಿ

 ಗಂಡಿನಲ್ಲಿ ಸಂತಾನೋತ್ಪತ್ತಿಯ ಗ್ರಂಥಿಗಳು ಅಡಗಿರುವ ಅಂಗವೇ ವೃಷಣಗಳು.ಇವು ಎರಡಿರುತ್ತವೆ. ಇವು ಹೆಣ್ಣಿನಲ್ಲಿರುವ ಅಂಡಾಶಯಗಳಿಗೆ ಸಮ.ಅಂಡಾಶಯದಲ್ಲಿ ಅಂಡಾಣುಗಳು ಉತ್ಪತ್ತಿಯಾಗುತ್ತವೆ. ವೃಷಣದಲ್ಲಿ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಕೆಲವರು ವೃಷಣಗಳು ಮತ್ತು ಮೂತ್ರಪಿಂಡ ಎರಡೂ ಒಂದೇ ಎಂದು ಭಾವಿಸುವುದುಂಟು. ಆದರೆ ಇವೆರಡೂ ಬೇರೆ ಬೇರೆ ಅಂಗಗಳು.
ವೃಷಣದಲ್ಲಿ ನಾರು ತಡಿಕೆಗಳಂತಹ ನೂರಾರು ಬೆಣೆಗಳಂತಹ ಹಾಲೆ [compartments]ಗಳಿವೆ. ಒಂದೊಂದು ವೃಷಣದಲ್ಲಿಯೂ ೪೦೦ಕ್ಕೂ ಅಧಿಕ ಹಾಲೆಗಳಿವೆ. ಪ್ರತಿ ಕಂಪಾರ್ಟ್ ಮೆಂಟಿನಲ್ಲಿಯೂ ೨-೩ ಕೊಂಕು ವೀರ್ಯಾಣುಜನಕ ನಾಳಗಳಿವೆ. ಇಲ್ಲಿ ಪ್ರತಿ ದಿನ ೫೦ ದಶಲಕ್ಷ ಪುರುಷ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಈ ವೀರ್ಯಾಣು ಜನಕನಾಳಗಳ ಉದ್ದ ಅಂದಾಜು ೬೭೦ ಮೀಟರುಗಳು.
ವೃಷಣದಲ್ಲಿ ಎರಡು ರೀತಿಯ ಜೀವಕೋಶಗಳಿವೆ. ಇದರಲ್ಲಿ ಒಂದು ವೀರ್ಯಾಣುಗಳನ್ನು ಉತ್ಪತ್ತಿ ಮಾಡಿದರೆ ಇನ್ನೊಂದು ಪುರುಷ ಹಾರ್ಮೋನ್ ಆದ testosterone ಅನ್ನು ಸ್ರವಿಸುತ್ತದೆ. ಈ ಹಾರ್ಮೋನ್ ವ್ಯಕ್ತಿಗೆ ಗಂಡಸುತನವನ್ನು ನೀಡುತ್ತದೆ. ಇದರಿಂದಲೇ ಪುರುಷ ಲಕ್ಷಣಗಳಾದ ಗಡ್ಡ-ಮೀಸೆ ಇತ್ಯಾದಿ ಕಾಣಿಸಿಕೊಳ್ಳುತ್ತದೆ.

.ವೀರ್ಯದ ಬಿಡಿ ಪರೀಕ್ಷೆ [ semen analysis ] ಬಗ್ಗೆ ತಿಳಿಸಿರಿ?

ಬಂಜೆತನದ ಪರೀಕ್ಷೆಯಲ್ಲಿ ಗಂಡಸಿನ ವೀರ್ಯದ ಸಮೀಕ್ಷೆ ಅತೀ ಮುಖ್ಯವಾದುದು. ಪರೀಕ್ಷೆಯಲ್ಲಿ ೪ ಅಂಶಗಳನ್ನು ಬಹು ಮುಖ್ಯವಾಗಿ ಪರಿಗಣಿಸುತ್ತಾರೆ.
೧ ವೀರ್ಯದ ಘನ ಪ್ರಮಾಣ
೨ ವೀರ್ಯಾಣುಗಳ ಸಂಖ್ಯೆ
೩ ವೀರ್ಯಾಣುಗಳ ಚಲನ ಶೀಲತೆ
೪ ವೀರ್ಯಾಣುಗಳ ರಚನೆ
ಬಿಡಿ ಪರೀಕ್ಷೆಗೆ ವೀರ್ಯವನ್ನು ಸಂಗ್ರಹಿಸುವಾಗ ಎಚ್ಚರಿಕೆ ಅಗತ್ಯ. ನೀರೋಧ್ ಅಥವಾ ಇನ್ಯಾವುದೇ ಶಿಶ್ನ ಚೀಲದಲ್ಲಿ ಸಂಗ್ರಹಿಸಲಾದ ವೀರ್ಯ ಪರೀಕ್ಷೆಗೆ ಯೋಗ್ಯವಲ್ಲ. ಹಸ್ತ ಮೈಥುನದಿಂದ ಇಲ್ಲವೇ ಲೈಂಗಿಕ ಕ್ರಿಯೆಯ ಸಮಯದಲ್ಲಿ ಅದಕ್ಕೆಂದೇ ಪ್ರಯೋಗ ಶಾಲೆಗಳಲ್ಲಿ ಲಭ್ಯವಿರುವ ಗಾಜಿನ ಬಟ್ಟಲುಗಳಲ್ಲಿ ವೀರ್ಯವನ್ನು ಶೇಖರಿಸಬೇಕು. ಅದಲ್ಲದೆ  ವೀರ್ಯವನ್ನು ಶೇಖರಿಸುವ ಮುನ್ನ ಆತ ಕನಿಷ್ಟ ಎರಡರಿಂದ ಏಳು ದಿನ ಲೈಂಗಿಕ ಕ್ರಿಯೆಯಿಂದ ದೂರವಿದ್ದಿರಬೇಕು. ನ್ಯೂನತೆ ಕಂಡು ಬಂದಲ್ಲಿ  ಮರು ಪರೀಕ್ಷೆಯ ಸಮಯದಲ್ಲಿ ವಾರದಿಂದ ಎರಡು ವಾರಗಳಿಗೊಮ್ಮೆ ಮೂರು ಬಾರಿಯಾದರೂ ಪರೀಕ್ಷೆ ಮಾಡಬೇಕಾಗುತ್ತದೆ.
.ಸ್ರೀಯ ಹೊರ ಜನನೇಂದ್ರಿಯಗಳು ಯಾವುವು? ಚಿತ್ರ ಸಮೇತ ವಿವರಿಸಿ-.page 50-55
ವೈದ್ಯಕೀಯ ಪರಿಭಾಷೆಯಲ್ಲಿ ಸ್ತೀಯರ ಹೊರ ಜನನೇಂದ್ರಿಯಗಳಿಗೆ ಸಾರಾಸಗಟಾಗಿ ’ಪುಂಡೆಂಡಮ್’ [pudendum] ಎಂದು ಕರೆಯಲಾಗಿದೆ ಲ್ಯಾಟಿನ್ ಭಾಷೆಯಲ್ಲಿ ಇದರ ಅರ್ಥ ನಾಚಿಕೆ ಪಡುವ ಸ್ಥಳ.
ಹೊರನೋಟಕ್ಕೆ ಕಾಣುವ ಜನನೇಂದ್ರಿಯಗಳನ್ನು ಗೊಲ್ಲಿ ಅಥವಾ ಪಂಗ [vulva] ಎಂದು ಕರೆಯುತ್ತಾರೆ. ಇದರ ಮುಖ್ಯ ಭಾಗಗಳು;
೧ದೊಡ್ಡ ಯೋನಿ ತುಟಿಗಳು [labia Majora]
೨ಚಿಕ್ಕ ಯೋನಿ ತುಟಿಗಳು [labia minora]
3 ರತಿ ದಿಮ್ಮು [the mons pubis or mons veneris]
4 ಭಗಾಂಕುರ ಅಥವಾ ಚಂದ್ರನಾಡಿ [the clitoris]
5 ಪಂಗಬಿರಿಕೆ ಅಥವಾ ಯೋನಿಯ ಹಜಾರ[ the vestibule]

.ಸ್ತ್ರೀಯ ಒಳ ಜನನೇಂದ್ರಿಯಗಳು ಯಾವುವು?


೧.ಅಂಡಾಶಯ [Ovary ]
೨.ಗರ್ಭನಾಳ [ Fallopian tube ]
೩. ಗರ್ಭ ಕೋಶ [ Uters ]
೪.ಗರ್ಭಕೋಶದ ಒಳ ಪೊರೆ [Endometrium ]
೫.ಮಧ್ಯ ಪದರು [Myometrium ]
೬.ಗರ್ಭಕೊರಳು [Cervic ]
೭.ಯೋನಿ [ Vagina ]

ಯೋನಿಗೆ ಸ್ಥಿತಿಸ್ಥಾಪಕತ್ವ ಗುಣ[ potential space ] ಇದೆ. ಹಾಗಾಗಿ ಶಿಶ್ನ ಯಾವುದೇ ಗಾತ್ರವಿದ್ದರೂ ಅದಕ್ಕೆ ಸ್ಥಳಾವಕಾಶ ಮಾಡಿಕೊಳ್ಳಬಹುದು. ಯೋನಿಯಲ್ಲಿ ಸ್ರವಿಸುವ ಯೋನಿರಸ ಸುಖದ ಸಂಭೋಗ ಕ್ರಿಯೆಗೆ ಅತೀ ಅವಶ್ಯಕ.ಹಾಗೆಯೇ ರೇತು ಕಣಗಳು ಗರ್ಭಕೋಶದೆಡೆ ಶೀಘ್ರವಾಗಿ ಚಲಿಸಲು ಅತೀ ಅವಶ್ಯಕ.

.ಗರ್ಭಕೋಶದ ತೊಂದರೆಗಳಾವುವು? ತಿಳಿಸಿ.

೧.ಬೆಳವಣಿಗೆಯಲ್ಲಿ ನ್ಯೂನತೆಗಳು
ಹುಟ್ಟಿನಿಂದಲೇ ಬೆಳವಣಿಗೆ ಇಲ್ಲದಿರಬಹುದು;
ತಳಾಧಾರ ಮತ್ತು ಗರ್ಭಕೊರಳು ಎರಡೆರಡು ಇರುವ ಸಾಧ್ಯತೆಯುಂಟು.
೨ಗರ್ಭಕೊರಳಿನ ಉರಿಯೂತ [Endometritis ]

ಇದು ಸೋಂಕುಗಳಿಂದ ಬರುತ್ತದೆ. ಇದರಿಂದ ಕೆಲವರಲ್ಲಿ ಬಿಳಿಸೆರಗು, ಸೊಂಟದ ನೋವು ಬರಬಹುದು. ತುರಿಕೆ ಮತ್ತು ದುರ್ವಾಸನೆಯುಕ್ತ ಬಿಳಿಸೆರಗು ಕಾಣಿಸಿಕೊಳ್ಳಬಹುದು.

೩.ಗರ್ಭಕೊರಳಿನ ಗಡ್ಡೆಗಳು, ಏಡಿಗಂತಿಯ ಕಾಯಿಲೆ [cancer of uterus]
ಸಂಭೋಗದ ನಂತರ ರಕ್ತಸ್ರಾವ ಕಂಡು ಬಂದಲ್ಲಿ ಏಡಿಗಂತಿಯ ಕಾಯಿಲೆಯಲ್ಲವೆಂದು ತಜ್ನರಿಂದ ಪರೀಕ್ಷೆ ಮಾಡಿಸಿ ಖಾತ್ರಿ ಪಡಿಸಿಕೊಳ್ಳಬೇಕು.
೪.ಎಡೆಗೆಟ್ಟ ಗರ್ಭದೊಳ್ಪರೆ ಬೇನೆ [endometriosis]
ಗರ್ಭಕೋಶದ ಒಳಪೊರೆ, ಅಂಡಾಶಯ, ಗರ್ಭನಾಳಗಳು, ಜಠರ ಮುಂತಾದವುಗಳೆಡೆಯಲ್ಲಿ ಹರಿದು ಹಂಚಿ ಹೋಗಿರುವ ಸಾಧ್ಯತೆಗಳುಂಟು. ಹಾಗಾದಾಗ ನೋವಿನೊಂದಿಗೆ ಕೂಡಿದ ಋತುಸ್ರಾವ ಸಾಮಾನ್ಯ.ಗರ್ಭಧಾರಣೆಗೂ ತೊಂದರೆಯಾಗಬಹುದು.
೫.ಗರ್ಭದೊಳ್ಪರೆಯುರಿತ [endometritis]
ಇದು ಗರ್ಭಕೋಶದ ಒಳಪೊರೆಯ ಸೋಂಕಿನಿಂದ ಒಂಟಾದ ಉರಿತ. ಗರ್ಭಕೋಶದೊಳಗಿನ ಗರ್ಭನಿರೋಧಕ ವಸ್ತುಗಳು ಇದಕ್ಕೆ ಮುಖ್ಯ ಕಾರಣ.
೬.ಗರ್ಭಕೋಶದ ನಾಡಿಗಂತಿಗಳು- ಇವು ಸಾಮಾನ್ಯವಾದ ಗಡ್ಡೆಗಳು.
7. ಗರ್ಭಕೋಶದ ಏಡಿಗಂತಿ ರೋಗ [cancer of uterus ]
ಋತುಸ್ರಾವವಲ್ಲದ ದಿನಗಳಲ್ಲಿ ಅತಿಯಾದ ರಕ್ತಸ್ರಾವ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು.
೮.ಗರ್ಭಕೋಶದ ಜಾರಿಳಿತ [uterine prolapse]
ಗರ್ಭಧಾರಣೆ, ಹೆರಿಗೆಯ ನಂತರ ಅದರಲ್ಲೂ ವಯಸ್ಸಾದ ಸ್ತ್ರೀಯರಲ್ಲಿ ಇದು ಸಾಮಾನ್ಯ.

.ಅಂಡಾಶಯದ [ovary] ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ.

ಅಂಡಾಣುಗಳನ್ನು ಉತ್ಪತ್ತಿ ಮಾಡುವ ಅಂಗವೇ ಅಂಡಾಶಯ. ಇದು ಗಂಡಿನ ವೃಷಣಕ್ಕೆ ಸಮ.
 ಗರ್ಭಕೋಶದ ಮೇಲ್ಭಾಗಕ್ಕೆ ಹೊಂದಿಕೊಂಡಂತೆ ಎಡ ಬಲಗಳಲ್ಲಿ ಒಂದೊಂದು ಅಂದರೆ ಒಟ್ಟು ಎರಡು ಅಂಡಾಶಯಗಳಿರುತ್ತವೆ. ಲೈಂಗಿಕ ಹಾರ್ಮೋನ್ ಗಳು ಇಲ್ಲಿಯೇ ಬಿಡುಗಡೆಯಾಗುತ್ತವೆ.
 ಅಂಡಾಶಯವು ಚಿಪ್ಪಿರುವ ಬಾದಾಮಿಯ ಆಕಾರದಲ್ಲಿರುತ್ತದೆ. ಇವುಗಳ ಉದ್ದ೧.೫ ಇಂಚು. ಅಗಲ ೧ ಇಂಚು. ದಪ್ಪ ೦.೭೫ ಇಂಚು. ತಲಾ ೫ರಿಂದ ೬ ಗ್ರಾಂ ತೂಕವಿರುತ್ತದೆ. ಅಂಡಾಶಯದಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ. ಸಾಮಾನ್ಯವಾಗಿ ಮುಟ್ಟಾಗುವುದಕ್ಕೆ ೧೪ ದಿನ ಮುಂಚೆ ಅಂಡಾಣು ಬಿಡುಗಡೆಯಾಗುತ್ತದೆ.
ಕೆಲವು ಕಾಯಿಲೆಗಳ ಸಂದರ್ಭಗಳಲ್ಲಿ ಎರಡೂ ಅಂಡಾಶಯಗಳನ್ನು ತೆಗೆಯುತ್ತಾರೆ. ಇದರಿಂದ ಲೈಂಗಿಕ ಬದುಕಿಗೆ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ.

೧೦.ಋತುಚಕ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ 

ಋತುಕ್ರಿಯೆ ಸ್ತ್ರೀಗೆ ನಿಸರ್ಗದತ್ತವಾಗಿ ಬಂದದ್ದು. ಸ್ವಾಭಾವಿಕ ಜೈವಿಕ ಕ್ರಿಯೆ. ಅದು ಹೆಣ್ತನದ ಪ್ರತಿಕ. ಆದರೂ ಅದರ ಬಗ್ಗೆ ಕೆಲವೊಂದು ಮೂಢನಂಬಿಕೆಗಳಿವೆ.
ಗರ್ಭಕೋಶದ ಒಳಪದರು ಒಂದು ಮಿಲಿಮೀಟರ್ ನಷ್ಟು ದಪ್ಪವಿದ್ದು ತಿಂಗಳ ಕೊನೆಯಲ್ಲಿ ಅದು ೨೫ ಮಿ.ಮೀ.ನಷ್ಟು ದಪ್ಪಗೆ ಬೆಳೆಯುತ್ತದೆ.  ಯಾಕೆ ಬೆಳೆಯುತ್ತದೆಯೆಂದರೆ ಅಂಡಾಶಯದಿಂದ ಬಿಡುಗಡೆಗೊಂಡ ಅಂಡಾಣು ವೀರ್ಯಾಣುವಿನೊಡನೆ ಸಂಯೋಗಗೊಂಡು ಫಲಿತ ಬ್ರೂಣವಾಗಿ ಗರ್ಭಕೋಶವನ್ನು ಪ್ರವೇಶಿಸಿದರೆ ಅದನ್ನು ಬರಮಾಡಿಕೊಂಡು ಪೋಷಿಸುವುದಕ್ಕಾಗಿ ಸಿದ್ಧಗೊಳ್ಳುವ ಪರಿ ಇದು. ಒಂದು ವೇಳೆ ಬ್ರೂಣದ ಆಗಮನವಾಗದೇ ಇದ್ದರೆ ಗರ್ಭಕೋಶದ ಲೋಳ್ಪರೆ [endometrium] ನಿರಾಶೆಯಿಂದ ಉದುರಿ ಬೀಳುತ್ತದೆ. ರಕ್ತ ನಾಳಗಳು ಒಡೆಯುತ್ತವೆ. ಅದುವೇ ರಜಸ್ರಾವ; ಗರ್ಭಕೋಶದಿಂದ ಹರಿದು ಯೋನಿಮಾರ್ಗವಾಗಿ ಹೊರತಳ್ಳಲ್ಪಡುತ್ತದೆ.
ಪ್ರತಿ ತಿಂಗಳೂ ನಡೆಯುವ ಈ ಕ್ರಿಯೆಯಲ್ಲಿ ೩ರಿಂದ ೫ದಿನಗಳ ಕಾಲ ಋತುಸ್ರಾವವಿರುತ್ತದೆ. ಒಬ್ಬ ಪ್ರೌಡ ಮಹಿಳೆಯಲ್ಲಿ ೯೦ ರಿಂದ ೨೫೦ ಮಿ.ಲಿ.ನಷ್ಟು ರಕ್ತ ಹೊರಹೋಗುತ್ತದೆ. ಇದರ ಜೊತೆ ೩೦ರಿಂದ ೬೦ ಎಂ.ಜಿ ಕಬ್ಬಿಣದ ಅಂಶ ನಷ್ಟವಾಗುತ್ತದೆ.

೧೧.ಮುಟ್ಟಿನ ತೊಂದರೆಗಳು ಯಾವುವು? ಸಂಕ್ಷಿಪ್ತವಾಗಿ ತಿಳಿಸಿ

೧.ಋತು ಯಾತನೆ [spasmodic dysmenorrheal]
ಹದಿಹರೆಯದವರಲ್ಲಿ ಇದು ಸಾಮಾನ್ಯ. ಮದುವೆಯಾಗದ, ಮಕ್ಕಳಿಲ್ಲದ ಅದರಲ್ಲೂ ಪಟ್ಟಣದ ಸ್ತ್ರೀಯರಲ್ಲಿ ಇದು ಸಾಮಾನ್ಯ. ಮುಟ್ಟು ಆರಂಭಕ್ಕೆ ಮೊದಲು, ಅಥವಾ ಸ್ರಾವ ಆರಂಭವಾಗುತ್ತಿದ್ದಂತೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೈಬಾರ, ಸೊಂಟನೋವು,ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ವಾಂತಿ,ವಾಕರಿಕೆ, ಭೇದಿ ಕೂಡಾ ಕಾಣಿಸಿಕೊಳ್ಳುತ್ತದೆ.
೨.ಕ್ರಮ ತಪ್ಪಿದ ಋತುಕ್ರಿಯೆ
ಇದೊಂದು ಸಾಮಾನ್ಯ ತೊಂದರೆ.ಇದನ್ನು [dysfunctional uterine bleeding] ಎನ್ನುತ್ತಾರೆ.
೩.ವಿಳಂಬಗತಿಯ ಮುಟ್ಟು.
೪.ಮುಟ್ಟಿನ ಮುಂಚಿನ ಉದ್ವೇಗ [ premenstrual tension ]
೫.ಮೈನೆರೆಯದಿರುವಿಕೆ-ಮುಟ್ಟಾಗದಿರುವಿಕೆ
೬.ಅವಿತುಕೊಂಡ ಋತುಸ್ರಾವ
೭.ಋತುಬಂಧ [menopause ]- ಇದೊಂದು ಸಾಮಾನ್ಯ ನೈಸರ್ಗಿಕ ಕ್ರಿಯೆ. ರೋಗವಲ್ಲ.೪೬ ರಿಂದ ೫೩ನೇ ವಯಸ್ಸಿನಲ್ಲಿ ಉಂಟಾಗಬಹುದು.

೧೨.ಸ್ತನಗಳ ಬಗ್ಗೆ ಇರುವ ಮಿಥ್ಯಗಳ ಬಗ್ಗೆ ತಿಳಿಸಿ.

ಮಗುವಿಗೆ ಹಾಲುಣಿಸಲು ನಿಸರ್ಗದತ್ತವಾಗಿ ಬಂದಿರುವ ಅಂಗ ಇದು. ಇದಲ್ಲದೆ ಲೈಂಗಿಕ ಪ್ರಚೋದನೆಯ ಬಹು ಮುಖ್ಯ ಅಂಗವಿದು.
ಬಹಳಷ್ಟು ಗಂಡಸರಲ್ಲಿ ತಮ್ಮ ಶಿಶ್ನದ ಗಾತ್ರ, ಉದ್ದ, ಅಗಲ ಮತ್ತು ಗಡಸುತನದ ಬಗ್ಗೆ ತಪ್ಪು ಕಲ್ಪನೆಗಳಿದ್ದಂತೆ ಬಹುಪಾಲು ಹೆಂಗಸರಲ್ಲಿ ತಮ್ಮ ಸ್ತನಗಳ ಗಾತ್ರ, ಆಕಾರ ಮತ್ತು ಗಡಸುತನಗಳ ಬಗ್ಗೆ ಹಲವಾರು ಬ್ರಮೆಗಳಿವೆ. ಅವುಗಳು ಯಾವುದೆಂದರೆ
೧.ಸ್ತ್ರೀಯ ಲೈಂಗಿಕ ಉದ್ರೇಕತೆಗೂ, ಸ್ತನಗಳ ಗಾತ್ರಕ್ಕೂ ಸಂಬಂಧವುಂಟು
೨.ಮಗುವಿಗೆ ಹಾಲುಣಿಸುವುದರಿಂದ ಮೊಲೆಗಳು ಜೋತು ಬೀಳುತ್ತವೆ.
೩.ಹದಿಹರೆಯದಲ್ಲಿ ಹಾರುವುದು, ಕುಣಿಯುವುದರಿಂದ ಸ್ತನಗಳು ಜೋತುಬೀಳುತ್ತವೆ.
೪.ಎದೆಗೆ ಏಟು ಬಿದ್ದರೆ, ಗಾಯವಾದರೆ ಕ್ಯಾನ್ಸರ್ ಬರುತ್ತದೆ.
೫.’ನಿಜವಾದ’ ಸ್ತ್ರೀಗೆ ಎದೆ ಉಬ್ಬಿ ನಿಲ್ಲುತ್ತದೆ.
೬.’ನಿಜವಾದ’ ಸ್ತ್ರೀಯ ಮೊಲೆ ತೊಟ್ಟು ಚೂಪಾಗಿರುತ್ತದೆ.
೭.ಸ್ತನಗಳ ಬಗ್ಗೆ ಆತಂಕಗೊಳ್ಳುವವರು ಗಂಡಸರು ಮಾತ್ರ.
೮.ಮೊಲೆಯ ಸುತ್ತ ಸ್ತ್ರೀಗೆ ಕೂದಲಿದ್ದರೆ ಅದು ಗಂಡಸುತನದ ಪ್ರತಿಕ.
೯.ಮಗುವಿಗೆ ಹಾಲುಣಿಸುವುದರಿಂದ ಜೀವನ ಪರ್ಯಂತ ಸ್ತನದ ಗಾತ್ರದಲ್ಲಿ ವ್ಯತ್ಯಾಸವಾಗುತ್ತದೆ.
೧೦.ಮೊಲೆ ಚಿಕ್ಕದಿರುವ ಸ್ತ್ರೀಯರು ಲೈಂಗಿಕವಾಗಿ ಉದ್ರೇಕಗೊಳ್ಳಲಾರರು.
೧೧.ಮೊಲೆ ಚಿಕ್ಕದಿರುವ ಸ್ತ್ರೀಯರಲ್ಲಿ ಲೈಂಗಿಕಾಸಕ್ತಿ ಕಡಿಮೆ.
೧೨.ದೊಡ್ಡ ಮೊಲೆಗಳು ಮಾತ್ರ ಗಂಡಸರನ್ನು ಆಕರ್ಷಿಸುತ್ತವೆ.
೧೩. ಸ್ತ್ರೀಯರು ತಮಗೆ ತಾವೇ ಎದೆಯನ್ನು ಮುಟ್ಟಿಕೊಳ್ಳುವುದರಿಂದ ಉದ್ರೇಕಗೊಳ್ಳಲಾರರು.
೧೪.ಎದೆಯನ್ನು ತೀಡುವುದರಿಂದ ಎಲ್ಲಾ ಸ್ತ್ರೀಯರಿಗೆ ಉದ್ರೇಕವಾಗುತ್ತದೆ.
೧೫.ಗಂಡಸರಲ್ಲಿ ಎದೆ ಮುಟ್ಟಿದಾಗ ಉದ್ರೇಕವಾದರೆ, ಅದು ಸಲಿಂಗರತಿಯ ದ್ಯೋತಕ-
ಮೇಲಿನ ಎಲ್ಲವೂ ಮಿಥ್ಯೆಗಳು; ಇದರಲ್ಲಿ ಸತ್ಯಾಂಶವಿಲ್ಲ.

೧೩.ಹಸ್ತ ಮೈಥುನದ [masturbation]ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ

ಲೈಂಗಿಕ ಅಭಿವ್ಯಕ್ತಿಯ ಸಾಮಾನ್ಯ ರೂಪ ಹಸ್ತಮೈಥುನ. ಪ್ರಚಲಿತದಲ್ಲಿ ಇದನ್ನು, ’ಜಟಕಾ ಹೊಡೆಯುವುದು”, ’ಉಜ್ಜಿಕೊಳ್ಳುವುದ”, ’ಕೈಕೆಲಸ’ ಎಂದೆಲ್ಲಾ ಕರೆಯುವುದುಂಟು.
ಲೈಂಗಿಕ ಸಂಗಾತಿಯಿಲ್ಲದೆ ತನ್ನಷ್ಟಕ್ಕೆ ಏಕಾಂತದಲ್ಲಿ ತಾನೇ ಲೈಂಗಿಕ ತೃಪ್ತಿಯನ್ನು ಕಂಡುಕೊಳ್ಳ್ವ ವಿಧಾನವೇ ಹಸ್ತ ಮೈಥುನ. ಜಗತ್ತಿನಲ್ಲಿ ಶೇ.೫೮ರಷ್ಟು ಸ್ತ್ರೀಯರು ಮತ್ತು ಶೇ.೯೨ರಷ್ಟು  ಪುರುಷರು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆಂದು ಕಿನ್ಸೆಯವರು ವೈಜ್ನಾನಿಕ ಮಾಹಿತಿ ನೀಡಿದ್ದಾರೆ.
ಲೈಂಗಿಕ ತೊಂದರೆಗಳಿಗೆ ಹಸ್ತ ಮೈಥುನ ಕಾರಣವಲ್ಲ. ಆದರೆ ಹಸ್ತ ಮೈಥುನದ ಬಗ್ಗೆ ತಪ್ಪು ಕಲ್ಪನೆಗಳ ಆತಂಕದಿಂದಾಗಿ ಲೈಂಗಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಲೈಂಗಿಕ ಚಿಕಿತ್ಸೆಯಲ್ಲಿ ಹಸ್ತಮೈಥುನದ ಬಗ್ಗೆ ತಿಳುವಳಿಕೆ ಕೊಡುವುದು ಮುಖ್ಯ
೧೪.ಲೈಂಗಿಕ ಆಸಕ್ತಿಯ ನಾಲ್ಕು ರೀತಿಗಳು ಯಾವುವು> ಸಂಕ್ಶಿಪ್ತವಾಗಿ ತಿಳಿಸಿ. Page112-113
ಲೈಂಗಿಕ ಆಸಕ್ತಿ, ಲೈಂಗಿಕ ಅಭಿವ್ಯಕ್ತಿಯ ಮೊದಲ ಘಟ್ಟ. ಲೈಂಗಿಕ ಆಸಕ್ತಿಯೇ ಚಿಗುರದಿದ್ದರೆ ಭವಿಷ್ಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲಿ ಸಾಧ್ಯವಾಗದಿರಬಹುದು. ಲೈಂಗಿಕ ಆಸಕ್ತಿಯ ಇರುವಿಕೆಯನ್ನು ನಾಲ್ಕು ರೀತಿಯಲ್ಲಿ ಅರಿತುಕೊಳ್ಳಬಹುದು.
೧.ಲೈಂಗಿಕ ಚೇತನ ಅಥವಾ ಚೋದಕ ಶಕ್ತಿ [sex drive]
೨.ಲೈಂಗಿಕ ಆಸೆ [sex wish]
3.ಲೈಂಗಿಕ ಅಪೇಕ್ಷೆ [willingness]
4.ಲೈಂಗಿಕ ಪ್ರೇರಣೆ[motivation]
ನಮ್ಮ ನಿದ್ರೆ, ಹಸಿವು ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆಯೋ ಹಾಗೆಯೇ ಲೈಂಗಿಕಾಸಕ್ತಿ ಕೂಡಾ ವ್ಯಕ್ತಿಯಿಂದ ವ್ಯಕ್ತಿಗೆ ಬಿನ್ನವಾಗಿರುತ್ತೆ. ಅದರ ಜೊತೆ ಲೈಂಗಿಕಾಸಕ್ತಿ ಚಿಮ್ಮುವ ಸಮಯ ಕೂಡಾ. ಗಂಡಿಗೆ ಬೆಳಗಿನ ಜಾವ ಪ್ರಶಸ್ತ ಸಮಯವೆನಿಸಿದರೆ ಹೆಣ್ಣಿಗೆ ಮಧ್ಯಾಹ್ನ ಒಳ್ಳೆ ಮೂಡು ಬರುತ್ತೆ ಎಂದು ಸಮೀಕ್ಷೆಗಳು ಹೇಳುತ್ತವೆ.
ನಮ್ಮ ನರಮಂಡಲ ಮತ್ತು ಲೈಂಗಿಕ ಹಾರ್ಮೋನ್ ಗಳು ನಮ್ಮ ಲೈಂಗಿಕ ಜೀವನವನ್ನು ನಿಯಂತ್ರಿಸುತ್ತವೆ. ಟೆಸ್ಟೊಸ್ಟಿರೋನ್ [testosterone] ಪುರುಷ ಪ್ರಧಾನ ಹಾರ್ಮೋನ್. ಆದರೆ ಇದು ಗಂಡು-ಹೆಣ್ಣು ಇಬ್ಬರ ಲೈಂಗಿಕ ಪ್ರಚೋದನೆಗೂ ಅತೀ ಅವಶ್ಯಕ.

೧೫.ಡಾ.ಮಾಸ್ಟರ್ಸ್ ಹಾಗೂ ಡಾ.ಜಾನ್ಸನ್ ರವರು ತಿಳಿಸಿರುವ ಲೈಂಗಿಕ ಪ್ರತಿಕ್ರಿಯೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ.

ಹಿಂದೆಲ್ಲಾ ರತಿಕ್ರೀಡೆ ಪ್ರಾರಂಭದಿಂದ ಕೊನೆತನಕ ಒಂದೇ ಘಟ್ಟವೆಂದು ಭಾವಿಸಲಾಗಿತ್ತು. ಆದರೆ ಗಂಡು-ಹೆಣ್ಣು ಇಬ್ಬರಲ್ಲೂ ರಕ್ತದ ಕೂಡುವಿಕೆಯಿಂದ ಉಂಟಾಗುವ ಒತ್ತಡ ಒಂದು ಭಾಗವಾದರೆ, ಅದರ ಸಡಿಲಿಕೆಯಿಂದ ಉಂಟಾಗುವ ಉಲ್ಲಾಸ,ಸಂತಸ ಇನ್ನೊಂದು ಭಾಗ ಎಂದು ಈಗ ತಿಳಿದಿದೆ. ಈ ವಿಚಾರಗಳನ್ನಾಧರಿಸಿ ಮಾಸ್ಟರ್ಸ್ ಮತ್ತು ಜಾನ್ಸನ್ ರವರು ಲೈಂಗಿಕ ಕ್ರಿಯೆಯನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದಾರೆ.
೧.ಉದ್ರೇಕ ಅಥವಾ ಪ್ರೇರಣೆ [excitement ]
೨ಸಮತಟ್ಟು [ plateau ]
೩.ಭಾವ ಪ್ರಾಪ್ತಿ ಅಥವಾ ಉತ್ತುಂಗ ಶಿಖರ [orgasm ]
೪.ವಿಘಟಣೆ [resolution ]
ಇತ್ತೀಚಿನ ಸಂಶೋಧನೆ ಈ ಘಟ್ಟಗಳನ್ನು ಕೂಡಾ ಪುನರ್ ವಿಂಗಡಿಸಿದೆ. ಅವುಗಳು ಯಾವುದೆಂದರೆ;
೧.ಲೈಂಗಿಕ ಕಾಮನೆ, ಆಸೆ, ಹಸಿವು, ಕಲ್ಪನೆ [ appetitive phase ]
೨.ಉದ್ರೇಕದ ಘಟ್ಟ [ excitement phase ]
೩.ಭಾವ ಪ್ರಾಪ್ತಿ [orgasm ]
೪.ವಿಘಟನೆ.[ resolution ]
ಸಂಪೂರ್ಣ ಲೈಂಗಿಕ ತೃಪ್ತಿಗೆ ಈ ಎಲ್ಲಾ ಹಂತಗಳೂ ಅತೀ ಮುಖ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳವ ದಂಪತಿಗಳಿಬ್ಬರಿಗೂ ಲೈಂಗಿಕ ಹಸಿವು ಇರಬೇಕು.ಅದಿಲ್ಲದೆ ಭಾವ ಪ್ರಾಪ್ತಿ ಹೊಂದಲು ಸಾಧ್ಯವಿಲ್ಲ.
ಲೈಂಗಿಕ ಉದ್ರೇಕವಾಗುತ್ತಿದ್ದಂತೆ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವುಂಟಾಗುತ್ತದೆ. ಇಬ್ಬರ ಜನನೇಂದ್ರಿಯಗಳಲ್ಲೂ ಅಧಿಕ ರಕ್ತ ಶೇಖರಣೆಯಾಗುತ್ತದೆ. ಗಂಡಿನಲ್ಲಿ ಇದು ಶಿಶ್ನ ನಿಮಿರುವಿಕೆಯಿಂದ ಗೋಚರವಾಗುತ್ತದೆ. ಸ್ತ್ರೀಯಲ್ಲಿ ಯೋನಿರಸ ಸ್ರವಿಸಲು ಆರಂಭವಾಗುತ್ತದೆ. 

೧೬.ಕೃತಕ ಲೈಂಗಿಕ ಸಾಧನಗಳಾವುವು? ತಿಳಿಸಿ

ನಿಸರ್ಗ ದಯಪಾಲಿಸಿರುವ ಅತಿ ಮುಖ್ಯ ’ಕೃತಕ’ ಲೈಂಗಿಕ ಸಾಧನವೆಂದರೆ ನಮ್ಮ ’ಬೆರಳುಗಳು’-ಸ್ತ್ರೀ ಪುರುಷ ಇಬ್ಬರಿಗೂ. ಭಗಾಂಕುರ, ಯೋನಿದುಟಿಗಳು ಹಾಗೆಯೇ ಯೋನಿಯೊಳಗಡೆ ಬೆರಳಾಡಿಸುವುದರಿಂದ ಸುಲಭವಾಗಿ ಸ್ತ್ರೀಯನ್ನು ಸುಖದ ಉತ್ತುಂಗಕ್ಕೆ ಕೊಂಡೊಯ್ಯಬಹುದು.
ಶೇ.೪೦ರಷ್ಟು  ಸ್ತ್ರೀಯರಿಗೆ ಸಂಬೋಗ ಕ್ರಿಯೆಯಲ್ಲಿ ಭಾವಪ್ರಾಪ್ತಿ ಸಾಧ್ಯವಾಗುವುದಿಲ್ಲವೆಂದು ಕೆಲವು ದೇಶಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಹಾಗಾಗಿ ಕೃತಕ ಲೈಂಗಿಕ ಸಾಧನಗಳ ಪ್ರಾಮುಖ್ಯತೆ ಇತ್ತೀಚೆಗೆ ಅರಿವಾಗುತ್ತಿದೆ.

ಕೃತಕ ಲೈಂಗಿಕ ಸಾಧನಗಳು ಆಧುನಿಕ ಸಮಾಜದ ಸೃಷ್ಟಿಯೇನಲ್ಲ. ಬಹಳ ಹಿಂದೆಯೇ ಜಪಾನು, ಚೀನಾ ಮುಂತಾದ ದೇಶಗಳಲ್ಲಿ ಯೋನಿಯೊಳಗೆ ಇಟ್ಟುಕೊಳ್ಳಬಲ್ಲಂತಹ ’ಯೋನಿಗುಂಡು’ಗಳು ಪ್ರಚಲಿತದಲ್ಲಿದ್ದುವು ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.
ಸ್ತ್ರೀಯರ ಕೃತಕ ಲೈಂಗಿಕ ಸಾಧನಗಳಲ್ಲಿ ಎರಡು ಬಗೆ;
೧.ಲೈಂಗಿಕ ಕ್ರಿಯೆಗೆ ಸಹಕಾರಿಯಾದ ಸಾಧನಗಳು-eg, DILDO ಕೃತಕ ಶಿಶ್ನ.
೨.ಲೈಂಗಿಕ ಸಂತೋಷದ ಸಾಧನಗಳು.-eg,VIBRATOR ಬ್ಯಾಟರಿಚಾಲಿತ ಶಿಶ್ನ
ಕೃತಕ ಶಿಶ್ನಗಳ ಉಪಯೋಗದಿಂದ ಯಾವ ತೊಂದರೆಯೂ ಇಲ್ಲ.

ಗಂಡಸರಲ್ಲಿ ಹಸ್ತಮೈಥುನ ಸುಲಭ ಕ್ರಿಯೆಯಾಗಿರುವುದರಿಂದ ಕೃತಕ ಲೈಂಗಿಕ ಸಾಧನದ ಉಪಯೋಗ ಅಷ್ಟಾಗಿ ಕಂಡು ಬರಲಿಲ್ಲ. ನಿಮಿರುವಿಕೆಯ ತೊಂದರೆಯಿರುವವರು, ಹಸ್ತಮೈಥುನದ ಬಗ್ಗೆ ಮುಜುಗರವಿರುವವರು  ಸ್ತ್ರೀಯರ ವೈಬ್ರೇಟರ್ ಅನ್ನು ಶಿಶ್ನ ಉದ್ರೇಕಕ್ಕೆ ಬಳಸಿಕೊಳ್ಳಬಹುದು.
ಈಗೀಗ ಜೀವಂತ ಸ್ತ್ರೀಯ ಅನುಭವವನ್ನು ನೀಡುವ,ಯೋನಿಯಿರುವ ಸ್ತ್ರೀ ಬೊಂಬೆಗಳು ಮಾರುಕಟ್ಟೆಗೆ ಬಂದಿವೆ.
ಪುರುಷರು ಜಾಸ್ತಿ ಹೊತ್ತು ಶಿಶ್ನದ ನಿಮಿರುವಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಶಿಶ್ನದುಂಗುರ [cock rings ]ವನ್ನು ಬಳಸಬಹುದು. ಚರ್ಮ ಅಥವಾ ರಬ್ಬರ್ ನಿಂದ ತಯಾರಿಸಲಾದ ಈ ಸಾಧನವನ್ನು ಶಿಶ್ನ ದೊಡ್ಡದಿದೆಯೆಂದು ತೋರಿಸುವುದಕ್ಕಾಗಿ ಪ್ಯಾಂಟಿನೊಳಗಡೆಯೂ ಧರಿಸುವುದುಂಟು.
ಸ್ತ್ರೀಯರು ಬದನೆಕಾಯಿ, ಕ್ಯಾರೆಟ್ ಮುಂತಾದ ತರಕಾರಿಗಳನ್ನು ಲೈಂಗಿಕ ಸಾಧನವಾಗಿ ಉಪಯೋಗಿಸಿದಂತೆ ಗಂಡಸರು ಸೈಕಲ್ ಟ್ಯೂಬ್, ಚರ್ಮದ ಬಟ್ಟೆಗಳನ್ನು ಉಪಯೋಗಿಸುತ್ತಾರೆ.

೧೭.ಕಾಂಡೋಮ್[ನಿರೋಧ್] ಉಪಯೋಗಗಳ ಬಗ್ಗೆ ತಿಳಿಸಿ?

ಏಡ್ಸ್, ಒಂದು ಗಂಭೀರವಾದ ಗುಣಪಡಿಸಲಾಗದ ಕಾಯಿಲೆ. ಇದು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಬರುತ್ತದೆ. ಅದೀಗ ನಮ್ಮ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಲಿದೆ. ಅದನ್ನು ತಡೆಯುವ ಏಕೈಕ ದಾರಿಯೆಂದರೆ ಲೈಂಗಿಕ ಸಂಪರ್ಕದಿಂದ ದೂರವಿರುವುದು. ಆದರೆ ಅದಂತೂ ಸಾಧ್ಯವಾಗದ ಮಾತು. ಹಾಗಾಗಿ ಲೈಂಗಿಕತೆಯಲ್ಲಿ ಭಾಗಿಯಾಗುವಾಗ ಕಾಂಡೋಮ್ ಧರಿಸುವುದು ಸುರಕ್ಷಿತವಾದ  ಮಾರ್ಗ.
ಕಾಂಡೋಮ್ ಉಪಯೋಗಿಸುವುದರಿಂದ ಏಡ್ಸ್ ತಡೆಗಟ್ಟುವುದು ಮಾತ್ರವಲ್ಲಾ ಬೇಡದ ಗರ್ಭಧಾರಣೆಯನ್ನು ಕೂಡಾ ತಡೆಗಟ್ಟಬಹುದು. ಜೊತೆಗೆ ಲೈಂಗಿಕ ರೋಗಗಳನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.
ಕಾಂಡೋಮ್ ಗಳು ರಬ್ಬರ್ ಇಲ್ಲವೆ ಲೇಟೆಕ್ಸ್ ನಿಂದ ಮಾಡಿದ ತೆಳುವಾದ ಚೀಲ.ಈಗೀಗ ಸ್ತ್ರೀಯರು ಧರಿಸುವ ಕಾಂಡೋಮ್ ಗಳು ಕೂಡಾ ಸಿಗುತ್ತಿವೆ. Reality ಎಂಬ ಹೆಸರಿನ ಈ ಕಾಂಡೋಮ್ ನಗರಗಳಲ್ಲಿ ಸಿಗುತ್ತಿದೆ.
೧೮.ಪೋರ್ ಪ್ಲೇ ಅಥವಾ ಸಂಬೋಗ ಪೂರ್ವ ರತಿಕ್ರೀಡೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿರಿ?page153-54,160-61
ರತಿಕ್ರೀಡೆ ಎನ್ನುವುದು ಒಂದು ಕಲೆ.ಅದೊಂದು ಕೌಶಲ್ಯ. ಅದು ಅವಸರದಲ್ಲಿ ಮಾಡಿ ಮುಗಿಸುವ ಕ್ರಿಯೆಯಲ್ಲ. ಗಂಡು ಹೆಣ್ಣು ಇಬ್ಬರೂ ಅದರಲ್ಲೇ ಏಕಭಾವದಿಂದ ತೊಡಿಗಿಕೊಂಡು ಸುಖವನ್ನು ಮೊಗೆಮೊಗೆದು ಹೀರಬೇಕು.ಅದು ಸುಲಭದಲ್ಲಿ ಸಿದ್ದಿಸುವುದಿಲ್ಲ. ಅದಕ್ಕೆ ಪೂರ್ವಸಿದ್ದತೆ ಬೇಕು ಅದುವೇ ಮುನ್ನಲಿವು ಅಂದರೆ ಸಂಭೋಗ ಪೂರ್ವ ರತಿಕ್ರೀಡೆ [fore play]
ಸಂಭೋಗಕ್ಕೆ ಗಂಡು ಬಹು ಬೇಗ ಸಿದ್ಧನಾಗುತ್ತಾನೆ. ಅದು ಶಿಶ್ನದ ನಿಮಿರುವಿಕೆಯಲ್ಲಿ ಗೊತ್ತಾಗುತ್ತದೆ. ಆದರೆ ಉದ್ರೇಕಗೊಳ್ಳುವಿಕೆಯಲ್ಲಿ ಹೆಣ್ಣು ನಿಧಾನ. ಅದು ಯೋನಿ ಒದ್ದೆಯಾಗುವುದರಿಂದ ಗೊತ್ತಾಗುತ್ತದೆ.  ಅವಸರಪಟ್ಟು ಗಂಡು ಮುಂದುವರಿದರೆ ಗಂಡಿಗೆ ಯೋನಿ ಪ್ರವೇಶ ಕಷ್ಟವಾಗಬಹುದು.ಹೆಣ್ಣಿಗೂ ನೋವಾಗಬಹುದು. ಯಾಕೆಂದರೆ ಸುಖದ ಸಮಾಗಮದಲ್ಲಿ ಯೋನಿಸ್ರಾವ ಬಹು ಮುಖ್ಯ ಪಾತ್ರ ವಹಿಸುತ್ತದೆ. ಲೈಂಗಿಕ ತಜ್ನರೊಬ್ಬರು ಹೆಣ್ಣನ್ನು ಇಸ್ತ್ರೀ ಪೆಟ್ಟಿಗೆಗೆ ಹೋಲಿಸಿ ಅದನ್ನು ಹೀಗೆ ವಿವರಿಸುತ್ತಾರೆ; ನೀವು ಸ್ವಿಚ್ ಅನ್ ಮಾಡಿದ ಮೇಲೂ ಅದು ಬಿಸಿಯಾಗಲು ಸಮಯ ಬೇಕಲ್ಲವೇ?  ಹಾಗ್ಯೇ ಹೆಣ್ಣು ಕೂಡಾ. ಆಕೆಯನ್ನು ರತಿಕ್ರೀಡೆಗೆ ಗಂಡು ಅಣಿಗೊಳಿಸಬೇಕು. ಅದು ಪ್ರೇಮ ಸಲ್ಲಾಪದಿಂದ ಸಾಧ್ಯ. ಸ್ಪರ್ಶ, ಚುಂಬನ, ಮೈಸವರುವುದು ಮುಂತಾದ ಕ್ರಿಯೆಗಳಿಂದ ಆಕೆಯನ್ನು ಉದ್ರೇಕಿಸಬಹುದು.
ಇದರ ಜೊತೆಗೆ ಏಕಾಂತ, ಒಳ್ಳೆಯ ಪರಿಸರ, ಆರೋಗ್ಯಕರವಾದ ಮೈ-ಮನಸ್ಸು ಎಲ್ಲವೂ ಕೂಡಾ ಮುಕ್ತ ಹಾಗೂ ಸುಖಕರವಾದ ಲೈಂಗಿಕ ಬದುಕಿಗೆ ಮುನ್ನುಡಿಯಾಗಬಲ್ಲವು.

೧೯.ಲೈಂಗಿಕಾಸನಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿರಿ.

ಲೈಂಗಿಕ ಕ್ರಿಯೆಯಲ್ಲಿ ಸಾಮಾನ್ಯವಾಗಿ ಜನರು ಪ್ರಾಮುಖ್ಯತೆಯನ್ನು ಕೊಡುವುದು ಲೈಂಗಿಕಾಸನಗಳಿಗೆ. ವೈವಿಧ್ಯತೆಗಾಗಿ ನೂರಾರು ಆಸನಗಳ ಬಗ್ಗೆ ತಜ್ನರು ವಿವರಣೆ ನೀಡಿದ್ದರೂ ಲೈಂಗಿಕ ಬದುಕಿಗೆ ಬೇಕಾಗಿರುವುದು ಕೆಲವು ಆಸನಗಳಷ್ಟೆ. ಕ್ರಿಯಾಶೀಲರಾದ, ಸೃಜನಶೀಲ ಜೋಡಿಗಳು ಅವುಗಳಲ್ಲೇ  ವೈವಿಧ್ಯತೆಗಳನ್ನು ಕಂಡುಕೊಳ್ಳಲು ಸಾಧ್ಯವಿದೆ.
ಲೈಂಗಿಕ ಕ್ರಿಯೆಯ ವಿಧಾನಗಳನ್ನು ಮುಖ್ಯವಾಗಿ ಮೂರು ವಿಧಗಳಲ್ಲಿ ವಿಂಗಡಿಸಲಾಗಿದೆ.
.ಶಿಶ್ನ-ಯೋನಿಯ ಸಮಾಗಮದ ಆಸನಗಳು.
ಅ.ಮುಖಾಮುಖಿ ಆಸನಗಳು ಹಾಗೂ ಹಿಂಬದಿಯ ಪ್ರವೇಶದ ಆಸನಗಳು
ಆ.ಪುರುಷ ಮೇಲೆ, ಸ್ತ್ರೀ ಮೇಲೆ ಇಲ್ಲವೇ ಪಕ್ಕದ ಆಸನಗಳು.
ಇ.ಮಲಗಿ,ಕುಳಿತು ಇಲ್ಲವೇ ನಿಂತು ಮಾಡುವ ಸಂಭೋಗಾಸನಗಳು

.ಶಿಶ್ನ-ಗುದ ಸಮಾಗಮದ ಆಸನಗಳು

.ಕೈ ಇಲ್ಲವೇ ಮುಖ ಮೈಥುನದ ಆಸನಗಳು

 ಲೈಂಗಿಕ ಕ್ರಿಯೆಯ ಮುಖ್ಯ ಉದ್ದೇಶ ಸಂಗಾತಿಗಳಿಬ್ಬರೂ ಸಂತೋಷ ಮತ್ತು ಭಾವಪ್ರಾಪ್ತಿಯನ್ನು ಹೊಂದುವುದು. ಅದು ಸಂಬೋಗ ಕ್ರಿಯೆಯಲ್ಲದೆ ಸಂಭೋಗ ಪೂರ್ವ ಹಾಗೂ ಸಂಭೋಗಾನಂತರದ ಚಟುವಟಿಕೆಗಳಿಂದಲೂ ಪಡೆಯಲು ಸಾಧ್ಯವಿದೆ. ಇದು ಏಕಾಏಕಿ ಸಂಭವಿಸುವಂತಹದ್ದಲ್ಲ. ಮೊದಲು ಕಾತರದ ದೃಷ್ಟಿ,ಚುಂಬನ, ದೇಹ ಸ್ಪರ್ಶ, ಮರ್ಧನ,ಮುಖಮೈಥುನ,ಕೊನೆಯಲ್ಲಿ ಯೋನಿ-ಶಿಶ್ನದ ಸಮಾಗಮ.ಸಂಭೋಗ ಕ್ರಿಯೆಯನ್ನು ಒಂದು ಆಸನದಲ್ಲಿ ನಡೆಸಿ, ಭಾವಪ್ರಾಪ್ತಿಯನ್ನು ಇನ್ನೊಂದು ಆಸನದಲ್ಲಿ ಹೊಂದಲು ಸಾಧ್ಯವಿದೆ.

೨೦.ಲೈಂಗಿಕ ವೈವಿಧ್ಯತೆ ಬಗ್ಗೆ ತಿಳಿಸಿರಿ

 ಮೇಲಿನ ಪ್ರಶ್ನೆಗೆ ಬರೆದ ಉತ್ತರವೇ ಇದಕ್ಕೂ ಹೊಂದುತ್ತದೆ.                                   

೨೧.ಗರ್ಭಧಾರಣೆ ಮತ್ತು ಲೈಂಗಿಕತೆ ಮಿಥ್ಯೆಗಳಾವುವು ತಿಳಿಸಿ?


.ಗರ್ಭದಾರಣೆಯ ನಂತರ ಸ್ತ್ರೀಯರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ.
ಇದು ಸ್ವಲ್ಪ ಮಟ್ಟಿಗೆ ನಿಜವಾದರೂ ಎಲ್ಲರಲ್ಲೂ ಹಾಗಾಗಬೇಕೆಂದೆನಿಲ್ಲ.
.ಗರ್ಭಧಾರಣೆಯ ಕಾರಣ ದೇಹದ ಬದಲಾವಣೆ ಗಂಡಿನಲ್ಲಿ ಲೈಂಗಿಕಾಸಕ್ತಿಯನ್ನು ಕಡಿಮೆ ಮಾಡುತ್ತದೆ. ಅದುದರಿಂದಲೇ ಅವರು ಪರಸ್ತ್ರೀಯನ್ನು ಅರಸಿಕೊಂಡು ಹೋಗುತ್ತಾರೆ.
ಹಾಗಾಗಬೇಕೆಂದೇನಿಲ್ಲ.ಕೆಲವು ಪುರುಷರಿಗೆ ಸ್ತ್ರೀಯ ದೇಹದ ಬದಲಾವಣೆಗಳು ಲೈಂಗಿಕವಾಗಿ ಉದ್ರೇಕತೆಯನ್ನುಂಟುಮಾಡಬಹುದು. ಇನ್ನು ಕೆಲವರಿಗೆ ಲೈಂಗಿಕಾಸಕ್ತಿ ಕ್ಷಿಣಿಸಲು ಕಾರಣವಾಗಬಹುದು. ಆದರೆ ಆತಂಕವನ್ನು ಬಿಟ್ಟುಪರಸ್ಪರ ತಿಳುವಳಿಕೆಯಿಂದ ಮುಂದುವರಿದರೆ ಲೈಂಗಿಕತೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಾರದು.

.ಗರ್ಭಿಣಿ ಸ್ತ್ರೀಯು ಭಾವ ಪ್ರಾಪ್ತಿಯನ್ನು ಹೊಂದಲಾರಳು!

ಇದು ನಿಜವಲ್ಲ.ಆದರೆ ಭಯದಿಂದ, ಅಂದರೆ ಗರ್ಭಪಾತವಾಗಬಹುದು ಇಲ್ಲವೇ ಹೆರಿಗೆಯಾಗಿಬಿಡಬಹುದು ಎಂಬ ಭಯವೇ ಇದಕ್ಕೆ ಕಾರಣ.

.ಮೊದಲ ಮೂರು ತಿಂಗಳಲ್ಲಿ ಗರ್ಭಿಣಿ ಸಂಭೋಗದಲ್ಲಿ ತೊಡಗಿದರೆ ಗರ್ಭಪಾತವಾಗುತ್ತದೆ.!

ಇಲ್ಲ. ಕೆಲವರಲ್ಲಿ ಇದು ಸಾಧ್ಯವಾದರೂ ಬಹಳ ಜನರಲ್ಲಿ ಹಾಗಾಗುವುದಿಲ್ಲ.
.ಗರ್ಭಿಣಿ ಸಂಭೋಗದಲ್ಲಿ ತೊಡಗುವುದರಿಂದ ಮುಂದೆ ಹುಟ್ಟುವ ಮಗು ವ್ಯಭಿಚಾರಿಯಾಗುತ್ತದೆ.
ವ್ಯಭಿಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ..
೬ಗರ್ಭಿಣಿ ಸ್ತ್ರೀಯು ಸಂಭೋಗದಲ್ಲಿ ತೊಡಗಿದರೆ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಮೈ ಮೇಲೆ ಗುರುತುಗಳು ಮೂಡುತ್ತವೆ!
ಇಲ್ಲ ಹಾಗಾಗಲು ಸಾಧ್ಯವಿಲ್ಲ.

೭ಗರ್ಭಧಾರಣೆಯ ನಂತರ ಪುರುಷ ಮೇಲಿನ ಭಂಗಿಯಿಂದ ಸಂಭೋಗಿಸಕೂಡದು!

ಕೊನೆಯ ಮೂರು ತಿಂಗಳಲ್ಲಿ ಈ ಭಂಗಿಯಿಂದ ಸ್ತ್ರೀಗೆ ತೊಂದರೆಯೆನಿಸಬಹುದಷ್ಟೆ. ಅದರಲ್ಲೂ ಕೆಲವು ಹೊಂದಾಣಿಕೆ ಮಾಡಿಕೊಳ್ಳುವುದರಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಸಾಧ್ಯ.
.ಗರ್ಭಿಣಿಯರಲ್ಲಿ ಹಸ್ತ ಮೈಥುನ ಸಲ್ಲದು!
ಹಾಗೇನಿಲ್ಲ. ಅದರಲ್ಲೂ ಹಸ್ತ ಮೈಥುನ ಲೈಂಗಿಕ ಅಭಿವ್ಯಕ್ತಿಗೆ ಒಂದು ಅನುಕೂಲಕರ ಮಾರ್ಗ; ವಿಧಾನ
. ಯೋನಿಯಲ್ಲಿ ಸಂಭೋಗದ ನಂತರ ಬಿಟ್ಟ ವಿರ್ಯಾಣುಗಳು ಗರ್ಭಕೋಶವನ್ನು ತಲುಪಿ ಬೆಳೆಯುತ್ತಿರುವ ಪಿಂಡಗೂಸಿಗೆ ಆಹಾರವನ್ನು ಒದಗಿಸುತ್ತವೆ!
ಇಲ್ಲ.
೧೦.ಸಂಭೋಗ ಹೆರಿಗೆ ನೋವಿಗೆ ಕಾರಣವಾಗುತ್ತದೆ.
ಇಲ್ಲ. ಕೆಲವೇ ಕೆಲವರಿಗೆ ಇದೂ ಕಾರಣವಾಗಲೂ ಬಹುದು.

೧೧.ಸಂಭೋಗದಿಂದ ಗರ್ಭಿಣಿಯರಲ್ಲಿ ಗರ್ಭಕೋಶದ ಸೋಂಕುಂಟಾಗಬಹುದು!

ಕೆಲವೇ ಕೆಲವರಲ್ಲಿ ಇದು ಸಾಧ್ಯವಾದರೂ ಈ ಭಯ ಹಲವರಲ್ಲಿ ವಿನಾಕಾರಣ ಆತಂಕಕ್ಕೆ ಕಾರಣವಾಗುತ್ತದೆ.
೧೨. ಪಿಂಡಗೂಸಿಗೆ ಸಂಭೋಗ ಸುಖದ ಅರಿವಾಗುತ್ತದೆ.
ಇಲ್ಲ.

೨೨.ಹಿಂಡುವಿಕೆಯ ಚಿಕಿತ್ಸೆ [squeeze technique] ಬಗ್ಗೆ ತಿಳಿಸಿ

ಶಿಶ್ನ ಮಣಿ ಮತ್ತು ಶಿಶ್ನಕಾಂಡವನ್ನು ಸೆರುವೆಡೆ ಹೆಬ್ಬೆರಳನ್ನು ಹಿಂಬದಿಯಲ್ಲೂ  ಮತ್ತು ಮೂರನೆಯ ಬೆರಳುಗಳನ್ನು ಮುಂಬದಿಯಲ್ಲೂ ಹಿಡಿಯಬೇಕು. ಹಿಂದು ಮುಂದು ಅಲ್ಲಾಡಿಸಿ ಶಿಶ್ನವನ್ನು  ಉದ್ರೇಕಿಸಿ ನಿಮಿರಿದ ಶಿಶ್ನವನ್ನು ಸಣ್ಣದು ಮಾಡುವುದೂ ಸುಲಭ. ಒತ್ತುಕೊಟ್ಟರೆ ಇಲ್ಲವೇ ನಿಧಾನವಾಗಿ ಹಿಸುಕಿದರೆ ಶಿಶ್ನದ ನಿಮಿರುವಿಕೆ ಕಡಿಮೆಯಾಗುತ್ತದೆ. ಪುನಃ ಹಿಂದು ಮುಂದು ಮಾಡುವುದರಿಂದ ಶಿಶ್ನವನ್ನು ನಿಮಿರಿಸಬಹುದು. ಆದರೆ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ಒತ್ತು ಕೊಡಬಾರದು.

ಶೀಘ್ರ ಸ್ಖಲನದ ತೊಂದರೆಯಿದ್ದರೆ ಪುರುಷ ಸಮಾಧಾನದಿಂದ ಮುಖ ಮೇಲೆ ಮಾಡಿ ಮಲಗಬೇಕು ಅವನ ಕಾಲ ಮಧ್ಯದಲ್ಲಿ ಸ್ತ್ರೀ ಕುಳಿತು ಹಿಂಡುವಿಕೆಯ ಚಿಕಿತ್ಸೆ ಮಾಡಬೇಕು. ಸ್ಖಲನದ ಭಾವನೆ ಬಂದ ಒಡನೆಯೇ ಸ್ತ್ರೀ ಹಿಂಡುವಿಕೆಯ ಚಿಕಿತ್ಸೆಯನ್ನು ಮುಂದುವರಿಸುತ್ತಿರಬೇಕು. ಆಗ ಸ್ಖಲನವಾಗುವುದಿಲ್ಲ. ಇದರಿಂದ ಪುರುಷನಿಗೆ ಶಿಶ್ನದ ನಿಮಿರುವಿಕೆ ಹಾಗೂ ಸ್ಖಲನದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ.ಒತ್ತು ಕೊಡುವುದನ್ನು ಶಿಶ್ನಕಾಂಡದ ಪೀಠದ ಬಳಿಯೂ ಮಾಡಬಹುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಆದರೆ ಇದು ಅತಿ ಸುಲಭದ ಹಾಗೂ ವೈಜ್ನಾನಿಕ ವಿಧಾನವಾಗಿದೆ.

23.ಕಲ್ಪನೆ ಮತ್ತು ಲೈಂಗಿಕತೆಯ[sex fantasy] ಪ್ರಾಮುಖ್ಯತೆಗಳೇನು?

ಮನುಷ್ಯ ಕಲ್ಪನಾ ಜೀವಿ.ಕಲ್ಪನೆಗಳಿಲ್ಲದ ಜೀವನ ಬರಡು.
 ನಮ ನಿಜ ಜೀವನದಲ್ಲಿ ನಾವು ಅನುಭವಿಸಲಾಗದ್ದನ್ನು, ಪಡೆಯಲಾಗದ್ದನ್ನು ಕಲ್ಪನೆಯಲ್ಲಿ ಅನುಭವಿಸುತ್ತೇವೆ ಎಂದು ಮನೋವಿಜ್ನಾನಿಗಳು ಪ್ರತಿಪಾದಿಸಿದ್ದಾರೆ.
 ಲೈಂಗಿಕ ಕಲ್ಪನೆಗಳು ಲೈಂಗಿಕ ಕ್ರಿಯೆಗೆ ಸಹಕಾರಿ ಎಂಬುದು ಈಗ ಸಾಬೀತಾಗಿದೆ೧೯೯೪ರಲ್ಲಿ ಅಮೇರಿಕಾದ ಚಿಕಾಗೋ ವಿಶ್ವವಿದ್ಯಾಲಯದವರು ’ಸೆಕ್ಸ್ ಇನ್ ಅಮೇರಿಕಾ’ಎಂಬ ಸಮೀಕ್ಷೆ ನಡೆಸಿದ್ದರು. ಅದರ ಪ್ರಕಾರ ಶೇ.೫೪ ರಷ್ಟು ಗಂಡಸರು ಮತ್ತು ಶೇ. ೧೯ ರಷ್ಟು ಹೆಂಗಸರು ತಾವು ಲೈಂಗಿಕ ಕಲ್ಪನೆಯನ್ನು ಕಾಣುವುದಾಗಿ ಒಪ್ಪಿಕೊಂಡಿದ್ದಾರೆ.
ನಿಜ ಜೀವನದಲ್ಲಿ ನಾವು ಯಾರನ್ನು ಗೌರವ, ಭಕ್ತಿಯಿಂದ ಕಾಣುತ್ತೇವೆಯೋ ಅವರನ್ನೇ ನಾವು ಕಲ್ಪನೆಯಲ್ಲಿ ಲೈಂಗಿಕ ಸಂಗಾತಿಗಳನ್ನಾಗಿ ಕಾಣಬಹುದು. ಹಾಗಾಗಿ ಲೈಂಗಿಕ ಕಲ್ಪನೆಗಳು ಅತ್ಯಂತ ಖಾಸಗಿಯಾದ, ಗೋಪ್ಯವಾಗಿಡಬೇಕದ ಮಧುರ ಕಲ್ಪನೆಗಳು.
ಸಂಬೋಗ ಕ್ರಿಯೆಯಲ್ಲಿ ಅದರಲ್ಲೂ ಭಾವಪ್ರಾಪ್ತಿಗೆ ಕಲ್ಪನೆಗಳು ಅತೀ ಅವಶ್ಯಕ. ಕಲ್ಪನಾ ಶಕ್ತಿಯ ಕೊರತೆಯಿರುವವರು ಭಾವಪ್ರಾಪ್ತಿಯನ್ನು ಹೊಂದುವುದು ಕಷ್ಟ.ಅಂತವರ ವೈವಾಹಿಕ ಬದುಕಿನಲ್ಲಿ ಸಾಮರಸ್ಯದ ಕೊರತೆಯೂ ಎದುರಾಗಬಹುದು.

24.ಶೀಘ್ರ ವೀರ್ಯ ಸ್ಖಲನ ಎಂದರೇನು? ತಿಳಿಸಿ

 ಸಂಭೋಗ ಪೂರ್ವದಲ್ಲಿಯೇ ಅಥವಾ ಸಂಭೋಗಕ್ಕೆ ಅಣಿಯಾಗುತ್ತಿರುವಾಗಲೇ, ಅಂದರೆ ಶಿಶ್ನ ಯೋನಿ ಪ್ರವೇಶದ ಹಂತದಲ್ಲಿರುವಾಗಲೇ ಇಲ್ಲವೇ ಯೋನಿ ಪ್ರವೇಶವಾದ ಕೆಲವೇ ಕ್ಷಣಗಳಲ್ಲಿ ವೀರ್ಯ ಸ್ಖಲನವಾದರೆ ಅದನ್ನು ಶೀಘ್ರ ಸ್ಖಲನ ಎನ್ನಲಾಗುತ್ತದೆ.
 ಪ್ರತಿಯೊಬ್ಬ ಪುರುಷನಿಗೂ ಜೀವನದಲ್ಲಿ ಒಮ್ಮೆಯಾದರೂ ಶೀಘ್ರ ಸ್ಖಲನ ಆಗಿರುತ್ತದೆ. ಶೀಘ್ರ ಸ್ಖಲನಕ್ಕೆ ಯಾವುದೇ ಪ್ರಮುಖ ದೈಹಿಕ ಕಾರಣ ಇದುವರೆಗೆ ಗೊತ್ತಾಗಿಲ್ಲ. ಇದಕ್ಕೆ ಬಹುಮಟ್ಟಿಗೆ ಪುರುಷನ ಮಾನಸಿಕ ಆತಂಕ ಮತ್ತು ಅವಸರವೇ ಮುಖ್ಯ ಕಾರಣ.
ಮದುವೆಯಾದ ಹೊಸದರಲ್ಲಿ, ಯುವಕರಲ್ಲಿ, ಅದರಲ್ಲೂ ಹದಿಹರೆಯದವರಲ್ಲಂತೂ ಇದು ಸಾಮಾನ್ಯ. ಸಂಗಾತಿಯನ್ನು ತೃಪ್ತಿ ಪಡಿಸಬೇಕೆಂಬ ರಭಸದಲ್ಲಿ ಬಹುಬೇಗನೆ ಉದ್ರೇಕಗೊಂಡು ಶೀಘ್ರವಾಗಿ ಮುಂದುವರೆದು ಸ್ಖಲಿಸಿಬಿಡುವುದುಂಟು. ಆಗ ಮನಸ್ಸು ಮುದುಡಿ ಹೋಗಿ ಮುಂದೆ ಲೈಂಗಿಕ ಕ್ರಿಯೆಯೇ ಆತಂಕದ ವಿಷಯವಾಗಿ ನಪುಂಸಕತ್ವಕ್ಕೆ ಕಾರಣವಾಗಬಹುದು.
ಸುಸ್ತಾದಾಗ, ಕುಡಿತದ ಅಮಲಿನಲ್ಲಿ, ಇಲ್ಲವೇ ಹಲವಾರು ದಿನಗಳ ನಂತರ ಸಂಭೋಗಕ್ರಿಯೆಯಲ್ಲಿ ತೊಡಲೆತ್ನಿಸಿದಾಗ ಯಾವನೇ ಪುರುಷನಿಗಾದರೂ ಶೀಘ್ರ ಸ್ಖಲನವಾಗಬಹುದು. ಆದರೆ ಅದನ್ನು ಕಾಯಿಲೆ ಎನ್ನಲಾಗದು. ಆದರೆ ಪ್ರತಿ ಸಲ ಸಂಭೋಗ ನಡೆಸುವಾಗಲೂ ಶೀಘ್ರಸ್ಖಲನವಾಗುತ್ತಿದ್ದರೆ ಆಗ ಅದನ್ನುಲೈಂಗಿಕ ತೊಂದರೆ ಎನ್ನಬಹುದು.ಆದರೆ ಅದಕ್ಕೂ ಚಿಕಿತ್ಸೆ ಇದೆ ಎನ್ನುವುದನ್ನು ಮರೆಯಬಾರದು.

25.ಲೈಂಗಿಕ ದುರ್ಭಲತೆ [impontence] ಎಂದರೇನು

ಅಪರೂಪಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸಲು ತೊಂದರೆಯಾದರೆ ಅದನ್ನು ಷಂಡತನ ಎನ್ನಲಾಗದು. ಆದರೆ ತಾನೆಲ್ಲಿ ಷಂಡನಾಗಿಬಿಟ್ಟೆನೋ ಎಂಬ ಭಯ ಆರಂಭವಾದರೆ ಅದೇ ಷಂಡತನಕ್ಕೆ ಕಾರಣವಾಗಬಹುದು.
 ಮಾಸ್ಟರ್ಸ್ ಮತ್ತು ಜಾನ್ಸನ್ ಪ್ರಕಾರ, ಯಾವ ಗಂಡಸಿಗೆ ಸಂಬೋಗಕ್ಕೆ ಬೇಕಾದ ಮಟ್ಟಿಗೆ ಶಿಶ್ನದ ನಿಮಿರುವಿಕೆ ಸಾಧ್ಯವಿಲ್ಲವೋ ಆತನನ್ನು ಲೈಂಗಿಕ ದೌರ್ಬಲ್ಯವುಳ್ಳ ವ್ಯಕ್ತಿ ಎನ್ನಬಹುದು. ಇಂತವನಿಗೆ ಸಂಭೋಗದಲ್ಲಿ ತೃಪ್ತಿಯನ್ನು ಪಡೆಯುವ ಮತ್ತು ಸಂಗಾತಿಗೆ ತೃಪ್ತಿಯನ್ನು ಕೊಡುವ ಶಕ್ತಿ ಇರುವುದಿಲ್ಲ.
ಶೀಘ್ರ ಸ್ಖಲನಕ್ಕೂ ಷಂಡತ್ವಕ್ಕೂ ವ್ಯತ್ಯಾಸವಿದೆಯೆಂಬುದನ್ನು ಗಮನಿಸಬೇಕು. ಇಲ್ಲಿ ಶಿಶ್ನದ ನಿಮಿರುವಿಕೆಗೆ ಯಾವುದೇ ತೊಂದರೆಯಿರುವುದಿಲ್ಲ. ಆದರೆ ಗರ್ಭಗುಡಿಯಲ್ಲಿಯೇ ಸ್ಖಲಿಸುವುದರಿಂದ ಸ್ವತಃ ತಾನು ಹಾಗು ಸಂಗಾತಿಗೆ ಸುಖ ನಿಡುವುದರಲ್ಲಿ ಸೋಲುತ್ತಾನೆ.
ಇನ್ನು ಬಂಜೆತನಕ್ಕೂ ಷಂಡತನಕ್ಕೂ ವ್ಯತ್ಯಾಸವುಂಟು.
 ಬಂಜೆತನದಲ್ಲಿ ಆತ ಶಕ್ತಿಯುತವಾದ ಇಲ್ಲವೇ ಫಲವಂತಿಕೆಯಿಂದ ಕೂಡಿದ ವೀರ್ಯಾಣುಗಳನ್ನು ಹೊಂದಿರುವುದಿಲ್ಲ. ಆಂದರೆ ಗರ್ಭದಾನಕ್ಕೆ ಕಾರಣನಾಗಲಾರ. ಆದರೆ  ಸಂಭೋಗ ಕ್ರಿಯೆ ನಡೆಸಬಲ್ಲ ಮತ್ತು ಸಂಗಾತಿಯನ್ನು ತೃಪ್ತಿ ಪಡಿಸಬಲ್ಲ.
ಷಂಡತನದಲ್ಲಿ ಗಂಡಸು ಸಂಭೋಗ ಕ್ರಿಯೆಯನ್ನು ನಡೆಸಲಾರ . ಸಂಗಾತಿಯನ್ನು ತೃಪ್ತಿ ಪಡಿಸಲಾರ.ಆದರೆ ಆತನ ವೀರ್ಯದಲ್ಲಿ ಫಲವಂತಿಕೆಯಿರಬಹುದು. ಗಡಸುತನದ ಕೊರತೆಯಿಂದಾಗಿ ಯೋನಿಪ್ರವೇಶ ಸಾಧ್ಯವಾಗದಿದ್ದರೂ, ವೀರ್ಯ ಯೋನಿದುಟಿಗಳ ಬಳಿ ಚೆಲ್ಲಿದರೂ ಸ್ತ್ರೀಗೆ ಗರ್ಭಧಾರಣೆಯಾಗಬಹುದು.
ಲೈಂಗಿಕ ದುರ್ಭಲತೆಗೆ ಮಾನಸಿಕ ಮತ್ತು ದೈಹಿಕ ಚಿಕಿತ್ಸೆಗಳೆರಡರ ಅವಶ್ಯಕತೆ ಇದೆ.
ಸಂಬೋಗ ವೈಪಲ್ಯಕ್ಕೆ ಪುರುಷನ ಅವಸರ ಮತ್ತು ಆತಂಕದ ಮನಸ್ಥಿತಿಯೇ ಬಹು ಮಟ್ಟಿಗೆ ಕಾರಣ.

26.ಸ್ತ್ರೀಯ ಲೈಂಗಿಕ ತೊಂದರೆಗಳಾವುವು? ತಿಳಿಸಿ 

ಉದ್ರೇಕದ  ತೊಂದರೆಗಳು

ಪುರುಷರಲ್ಲಿ ಲೈಂಗಿಕ ಉದ್ರೇಕವನ್ನು ಶಿಶ್ನದ ನಿಮಿರುವಿಕೆಯಿಂದ ಸುಲಭವಾಗಿ ಗುರುತಿಸಬಹುದು.ಆದರೆ ಸ್ತ್ರೀಯು ಉದ್ರೇಕಗೊಂಡಿದ್ದಾಳೋ ಇಲ್ಲವೋ ಎಂದು ಅರಿಯುವುದು ಕಷ್ಟ.ಸ್ವತಹ ಅಕೆಗೇ ಇದು ಅರಿವಿಗೆ ಬಾರದಿರಬಹುದು. ಯಾಕೆಂದರೆ ಉದ್ರೇಕಗೊಳ್ಳದೆಯೂ ಆಕೆ ಸಂಭೋಗ ಕ್ರಿಯೆಯಲ್ಲಿ ಭಾಗವಹಿಸಬಹುದು. ಅದರೆ ಭಾವಪ್ರಾಪ್ತಿಗೆ ಆಕೆ ಉದ್ರೇಕಗೊಳ್ಳುವುದು ಅತೀ ಮುಖ್ಯ. ಯೋನಿಯೊಳಗಿನ ಸ್ರಾವ ಆಕೆ ಉದ್ರೇಕಗೊಂಡಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಅದು ಸಂಭೋಗ ಪೂರ್ವ ರತಿಕ್ರೀಡೆಯಿಂದ ಸಾಧ್ಯ. ಇದು ಸ್ತ್ರೀಯ ದೃಷ್ಟಿಯಿಂದ ಬಹಳ ಮುಖ್ಯ.

.ತಣ್ಣರತಿ [FRIGIDITY]

ಭಾವಪ್ರಾಪ್ತಿಯ ತೊಂದರೆಗಳು ಪುರುಷರಿಗಿಂತಲೂ ಸ್ತ್ರೀಯರಲ್ಲಿ ಹಲವು ಪಟ್ಟು ಜಾಸ್ತಿ.ಸಂಭೋಗ ಕ್ರಿಯೆಯಲ್ಲಿ ಪುರುಷ ಸ್ಖಲಿಸಿದರೂ ಸ್ತ್ರೀ ಭಾವ ಪ್ರಾಪ್ತಿಯನ್ನು ಪಡೆಯಲಾರಳು. ಅವಳಿಗೆ ಸಂಭೋಗನಂತರದ ಸಲ್ಲಾಪ ಬೇಕಾಗುತ್ತದೆ. ಭಗಾಂಕುರದ ತೀಡುವಿಕೆ ಅಥವಾ ಮುಖ ಮೈಥುನದ ಅವಶ್ಯಕತೆಯಿರುತ್ತದೆ. ಅದುದರಿಂದ ಪುರುಷರು ಸ್ಖಲಿಸಿದ ಕೂಡಲೇ ಪಕ್ಕಕ್ಕೆ ತಿರುಗಿ ಮಲಗಬಾರದು ಸ್ಪರ್ಶವನ್ನು ಮುಂದುವರಿಸಬೇಕು.ಬೇಕೆನಿಸಿದರೆ G.SPOT ಅನ್ನು ತೀಡಿ ಉದ್ರೇಕಿಸಿ ಆಕೆ ಭಾವಪ್ರಾಪ್ತಿಯನ್ನು ಹೊಂದುವಂತೆ ಮಾಡಬೇಕು. ಹಿಂಬದಿಯಿಂದ ಸಂಭೋಗದಿಂದ ಜಿ-ಸ್ಪಟ್ ತೀಡುವಿಕೆ ಜಾಸ್ತಿಯಾಗುವುದರಿಂದ ಸ್ತ್ರಿಗೆ ಭಾವ ಪ್ರಾಪ್ತಿ ಸುಲಭವಾಗುತ್ತದೆ. ಸ್ತ್ರೀ ಉದ್ರೇಕಗೊಂಡು ಭಾವ ಪ್ರಾಪ್ತಿಯ ಮಟ್ಟಕ್ಕೆ ಹೋಗದಿದ್ದರೆ ಸ್ತ್ರೀಗೆ ತುಂಬಾ ಯಾತನೆಯಾಗುತ್ತದೆ. ಯೋನಿಯುರಿತ, ದೇಹದ ಉರಿ, ಆತಂಕ, ಕೋಪ,ಎಲ್ಲವೂ ಸಾಧ್ಯ.

ಯೋನಿ ನೋವು ಸೆಡೆತ [vaginismus ]

ಯೋನಿ ಸುತ್ತ ಇರುವ ಮಾಂಸಖಂಡಗಳನ್ನು ಸ್ತ್ರೀಯು ತನಗರಿವಿಲ್ಲದೆಯೇ ಬಿಗಿ ಹಿಡಿಯುವುದರಿಂದಶಿಶ್ನಕ್ಕೆ ಯೋನಿ ಪ್ರವೇಶ ಸಾಧ್ಯವಾಗುವುದಿಲ್ಲ.
ಹೇವರಿಕೆ ತೊಂದರೆ [ sexual aversion disorder ]
ಲೈಂಗಿಕತೆಯ ಬಗ್ಗೆ ಕೀಳಾದ ಭಾವನೆ, ಎಳೆಯ ವಯಸ್ಸು, ಲೈಂಗಿಕವಾಗಿ ಕೆಟ್ಟ ಅನುಭವಗಳು, ನೋವಾಗಬಹುದೆಂಬ ಭಯ ಇವೆಲ್ಲಾ ಕಾರಣಗಳಿಂದ ಸಂಭೋಗವೇ  ದಂಪತಿಗಳಲ್ಲಿ ಸಾಧ್ಯವಾಗದೇ ಇರಬಹುದು.
. ನೋವು ಕೂಟ [dyspareunia ]
ಸಾಮಾನ್ಯವಾಗಿ ಸಂಭೋಗ ಎಂಬುದು ಸ್ತ್ರೀ-ಪುರುಷ ಇಬ್ಬರಿಗೂ ಸಂತೋಷದಾಯಕ ಕ್ರಿಯೆ. ಆದ್ರೆ ಕೆಲವೊಮ್ಮೆ ಇದು ನೋವು ತರಬಲ್ಲುದು. ಹಾಗೇನಾದರು ಆದಲ್ಲಿ ಏನೋ ತೊಂದರೆಯಿದೆಯೆಂದು ಆರ್ಥ. ಮಹಿಳೆಯರಲ್ಲಿ ಇದು ಜಾಸ್ತಿ. ಗರ್ಭಧಾರಣೆ, ಜನನ, ಮುಟ್ಟು ಮುಂತಾದ ಸ್ತ್ರೀಯರುಗೇ ಮೀಸಲಾದ ಸಂಗತಿಗಳು ಇದಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಇದಕ್ಕೆ ಇತರ ದೈಹಿಕ ಮತ್ತು ಮಾನಸಿಕ ಕಾರಣಗಳೂ ಇರುವ ಸಾಧ್ಯತೆಯಿದೆ.
ಅದರೆ ಮೇಲಿನ ಎಲ್ಲಾ ತೊಂದರೆಗಳಿಗೆ ಚಿಕಿತ್ಸೆಯಿದೆ ಎಂಬುದನ್ನು ತಿಳಿದಿರಬೇಕು.

27.ಬಂಜೆತನ; ಗಂಡು-ಹೆಣ್ಣಿನ ಪಾತ್ರವೇನು ತಿಳಿಸಿ.

ಮಗುವನ್ನು ಪಡೆಯಲು ಸತತ ಪ್ರಯತ್ನ ನಡೆಸಿ ಒಂದು ವರ್ಷವಾದರೂ ಗರ್ಭಧಾರಣೆಯಾಗದಿದ್ದರೆ ಆಗ ಬಂಜೆತನವಿರಬಹುದೆಂದು ತರ್ಕಿಸಬಹುದು.ಬಂಜೆತನ ಮತ್ತು ಫಲವಂತಿಕೆ ಒಂದೇ ನಾಣ್ಯದ ಎರಡು ಮುಖಗಳು. ಸ್ತ್ರೀಯಲ್ಲಿ ಆಕೆ ಗರ್ಭ ಧರಿಸುವುದು ಮತ್ತು ಜೀವಂತ ಮಗುವನ್ನು ಹೆರುವುದು ಫಲವಂತಿಕೆಯ ದ್ಯೋತಕ. ಹಾಗೆಯೇ ಗಂಡು ಹೆಣ್ಣನ್ನು ಗರ್ಭಧರಿಸುವಂತೆ ಮಾಡುವುದು ಗಂಡಿನ ಫಲವಂತಿಕೆಯ ಲಕ್ಷಣ. ಹಾಗಾಗಿ ಬಂಜೆತನ ಎಂಬುದು ಇಬ್ಬರಿಗೂ ಅನ್ವಯಿಸುತ್ತದೆ.
ಬಂಜೆತನದಲ್ಲಿ ಶಾಶ್ವತ ಬಂಜೆತನ ಮತ್ತು ತಾತ್ಕಾಲಿತ ಬಂಜೆತನ ಎಂದು ವಿಂಗಡಿಸಬಹುದಾಗಿದೆ. ಇಂಗ್ಲೀಷಿನಲ್ಲಿ ತಾತ್ಕಾಲಿಕ ಬಂಜೆತನಕ್ಕೆ infertility ಎಂದೂ ಶಾಶ್ವತ ಬಂಜೆತನಕ್ಕೆ sterility ಎಂದೂ ಕರೆಯಲಾಗಿದೆ.
ಬಂಜೆತನಕ್ಕೆ ಇಬ್ಬರೂ ಕಾರಣವಾದರೂ ಸಮಾಜದಲ್ಲಿ ಹೆಣ್ಣನ್ನೇ ಕಾರಣೀಭೂತಳನ್ನಾಗಿಸುವುದು ಸಾಮಾನ್ಯ. ಆದ್ರೆ ಬಂಜೆತನಕ್ಕೆ ವೈದ್ಯಕೀಯ ಕಾರಣಗಳನ್ನು ಹುಡುಕುವ ಸಂದರ್ಭದಲ್ಲಿ ಪುರುಷನನ್ನೇ ಮೊದಲು ಪರೀಕ್ಷೆಗೆ ಒಳಪಡಿಸುತ್ತಾರೆ. ಆತನಲ್ಲಿ ಬಂಜೆತನದ ಅಂಶಗಳು ಇಲ್ಲವೆಂದಾದರೆ ಮಾತ್ರ ಸ್ತ್ರೀಯನ್ನು ಪರೀಕ್ಷೆ ಮಾಡಲಾಗುತ್ತದೆ.
ಗಂಡಿನ ಹೊರ ಜನನೇಂದ್ರಿಯವಾದ ತರಡು ಬೀಜ ಅಥವಾ ವೃಷಣಗಳು ವೀರ್ಯಾಣು ಉತ್ಪಾದನೆಯ ಕೇಂದ್ರಗಳು. ಪುರುಷ ಹಾರ್ಮೋನಾದ ಟೆಸ್ಟೊಸ್ಟೀರೋನ್ ಕೂಡಾ ಇಲ್ಲಿಯೇ ಉತ್ಪಾದನೆಯಾಗುತ್ತದೆ. ವೃಷಣಗಳ ತಾಪಮಾನ ದೇಹದ ತಾಪಮಾನಕ್ಕಿಂತಲೂ ೧ರಿಂದ ೨ ಸೆಂಟಿಗ್ರೇಡ್ ಡಿಗ್ರಿಯಷ್ಟು ಕಡಿಮೆಯಿರಬೇಕು. ಇದು ಜಾಸ್ತಿಯಾದರೆ ಬಂಜೆತನಕ್ಕೆ ಕಾರಣವಾಗಬಹುದು. ಇದಲ್ಲದೆ ವೃಷಣಗಳು ಹುಟ್ಟಿನಿಂದಲೇ ಹೊಟ್ಟೆಯೊಳಗೇ ಉಳಿದುಬಿಟ್ಟಿದ್ದರೆ [undescended Teste] ವಿರ್ಯಾಣು ಉತ್ಪಾದನೆಗೆ ತೊಂದರೆಯಾಗಬಹುದು. ಹೆಚ್ಚು ಶಾಖ ಇರುವಲ್ಲಿ X-ray ವಿಭಾಗಗಳಲ್ಲಿ ಕೆಲಸ ಮಾಡುವವರಲ್ಲಿ ಬಂಜೆತನದ ಪ್ರಮಾಣ ಜಾಸ್ತಿಯಿರುತ್ತದೆ.
ತರಡಿನ ರಕ್ತ ನಾಳಗಳ ತೊಂದರೆಯಾದ ಸಿರಬಾವು [Varicocele] ತೊಂದರೆಗಳು ಗಂಡಸರಲ್ಲಿನ ಶೇ.೪೦ ರಷ್ಟು ಬಂಜೆತನಕ್ಕೆ ಕಾರಣವಾಗಿದೆ.
ಸ್ತ್ರೀಯರಲ್ಲಿ ಗರ್ಭನಾಳದ ಕೆಲವು ಕಾಯಿಲೆಗಳು, ಅದರಲ್ಲೂ ಮುಖ್ಯವಾಗಿ ಗೊನೋರಿಯಾ, ಟಿ.ಬಿ, ಗರ್ಭಪಾತಕ್ಕೆ ಸಂಬಂಧಿಸಿದ ಗರ್ಭಕೋಶದ ಉರಿಯೂತ, ಮೊದಲಾದ ಕಾಯಿಲೆಗಳಲ್ಲಿ ಗರ್ಭನಾಳ ಮುಚ್ಚಲ್ಪಟ್ಟು ಬಂಜೆತನಕ್ಕೆ ಕಾರಣವಾಗಬಲ್ಲವು. ಇದಲ್ಲದೆ ಜನನೇಂದ್ರಿಯಗಳ ಬೆಳವಣಿಗೆ ಹಾಗೂ ರಚನೆಯಲ್ಲಿ ತೊಂದರೆಗಳಿದ್ದಾಗಲೂ ಬಂಜೆತನ ಉಂಟಾಗಬಹುದು.
ಪುರುಷನನ್ನು ಮೊದಲು ಪರೀಕ್ಷೆ ಮಾಡಿ ಅನಂತರ ಸ್ತ್ರೀಯನ್ನು ಪರೀಕ್ಷೆ ಮಾದಲಾಗುವುದು.ಆದರೆ ಹೆಚ್ಚು ವಿವರವಾಗಿ ಪರೀಕ್ಷೆಗೆ ಒಳಪಡಿಸುವುದು ಆಕೆಯನ್ನೇ.

28.ತಾತ್ಕಾಲಿಕ ಗರ್ಭ ನಿರೋಧಕಗಳಾವುವು? ತಿಳಿಸಿ 

ಗರ್ಭ ನಿರೋದಕಗಳನ್ನು ನೈಸರ್ಗಿಕ ಮತ್ತು ಕೃತಕ ಎಂದು ವಿಂಗಡಿಸಬಹುದು. ನೈಸರ್ಗಿಕ ವಿಧಾನ ಅಂದರೆ ಸಂಭೋಗದಲ್ಲಿ ತೊಡಗಿದರೂ ಗರ್ಭಧಾರಣೆಯಾಗದಂತೆ ಎಚ್ಚರ ವಹಿಸುವುದು. ಅಂದರೆ ಗಂಡಸು ಸ್ಖಲಿಸುವ ಮೊದಲೇ ಯೋನಿಯಿಂದ ಶಿಶ್ನವನ್ನು ಹೊರ ತೆಗೆಯುವುದು. ಸುರಕ್ಷಿತ ದಿನಗಳಲ್ಲಿ ಸಂಭೋಗ ನಡೆಸುವುದು. ಮುಟ್ಟಿನ ದಿನಗಳಲ್ಲಿ ಸಂಭೋಗ ನಡೆಸುವುದು.
ಕೃತಕ ವಿಧಾನದಲ್ಲಿ ಜನಪ್ರಿಯಗೊಂಡಿರುವುದು ಕಾಂಡೋಮ್ ಧಾರಣೆ. ಈಗೀಗ ಸ್ತ್ರೀಯರ ಕಾಂಡೋಮ್ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಸ್ತ್ರಿಯರು ಉಪಯೋಗಿಸುವ ಗರ್ಭ ನಿರೋಧಕ ಗುಳಿಗೆಗಳು, ಗರ್ಭದೊಳಗಿಡುವ ಸಾಧನಗಳ ಬಗ್ಗೆ ವೈದ್ಯರ ಸಲಹೆ ಮತ್ತು ಅವರ ಸೇವೆಯಿಂದಲೇ ನಡೆಯಬೇಕು. ಇದಲ್ಲದೆ ಪುರುಷರ ಗರ್ಭ ನಿರೋಧಕ ಶಸ್ತ್ರ ಚಿಕಿತ್ಸೆ [Vasectomy ] ಮತ್ತು ಸ್ತ್ರೀಯರ ಟುಬೆಕ್ಟಮಿ [Tubectomy ] ಶಸ್ತ್ರ ಚಿಕಿತ್ಸೆಗಳು ಶಾಶ್ವತ ಗರ್ಭ ನಿರೋಧಕ ಪದ್ಧತಿಗಳೆಂದು ಪರಿಗಣಿತವಾಗಿದೆ. ಆದುದರಿಂದಲೇ ಇವುಗಳನ್ನು ಶಾಶ್ವತ ಸಂತಾನ ಹರಣ ಶಸ್ತ್ರ ಚಿಕಿತ್ಸೆ [Sterization] ಗಳೆಂದು ಕರೆಯಲಾಗಿದೆ.

29.ಲೈಂಗಿಕ ಕಾಯಿಲೆಗಳಾವುವು? ತಿಳಿಸಿ

ಲೈಂಗಿಕ ಕ್ರಿಯೆ ಇಲ್ಲವೇ ಲೈಂಗಿಕ ಚಟುವಟಿಕೆಗಳ ಮೂಲಕ ಹರಡುವ ಕಾಯಿಲೆಗಳನ್ನು ಲೈಂಗಿಕ ಕಾಯಿಲೆಗಳು [ Sexually Transmitted Diseases ]ಅಥವಾ S.T.D ಎಂದು ಕರೆಯುತ್ತಾರೆ. ಈ ಕಾಯಿಲೆಗಳನ್ನು ಹಿಂದೆ venereal Diseases ಎಂದು ಕರೆಯುತ್ತಿದ್ದರು.
ಲೈಂಗಿಕ ಕಾಯಿಲೆಗಳು ಮುಖ್ಯವಾಗಿ ನಾಲ್ಕು ವಿಧಗಳಿಂದ ಹರಡುತ್ತದೆ.
೧. ಯೋನಿ ಇಲ್ಲವೇ ಗುದ ಸಂಭೋಗ
೨. ಬಾಯಿಯಿಂದ ಬಾಯಿಗೆ ಆಳವಾದ ಚುಂಬನ
೩. ಯೋನಿ, ಶಿಶ್ನ ಇಲ್ಲವೇ ಗುದಕ್ಕೆ ಮುಖ ಮೈಥುನ
೪. ಮುಖ, ಶಿಶ್ನ ಅಥವಾ ಯೋನಿ ಕಾಯಿಲೆಯಿರುವ ಚರ್ಮದೊಂದಿಗೆ ಸ್ಪರ್ಶ.
ಕೆಲವು ಲೈಂಗಿಕ ಕಾಯಿಲೆಗಳು ತೀವ್ರವಾದ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೆ ಕಾರಣವಾಗಬಹುದು. ಅದರಲ್ಲೂ ಏಡ್ಸ್, ಹೆಪಟಿಸ್ ಮತ್ತು ಹರ್ಪಿಸ್ ಕಾಯಿಲೆಗಳಿಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆಗಳಿಲ್ಲ. ಮುಂಜಾಗರುಕತೆ ವಹಿಸುವುದೇ ಇದಕ್ಕಿರುವ ಸದ್ಯದ ದಾರಿ. ಆದರೂ ಲೈಂಗಿಕ ರೋಗಗಳು ಇತ್ತೀಚೆಗೆ ತೀವ್ರ ಗತಿಯಲ್ಲಿ ಹರಡುತ್ತಿರುವುದಂತು ಸತ್ಯ.

ಗುಣಪಡಿಸಬಹುದಾದ ಸಾಮಾನ್ಯ ಲೈಂಗಿಕ ಕಾಯಿಲೆಗಳು;

೧. ಜನನೇಂದ್ರಿಯಗಳ ಮೇಲೆ ಗಾಯ, ಹುಣ್ಣುಗಳಾಗುವ ಲೈಂಗಿಕ ಕಾಯಿಲೆಗಳು
ಲೈಂಗಿಕ ಹರ್ಪಿಸ್ ಕಾಯಿಲೆ [herpes]
ಸಿಪಿಲಿಸ್ [Syphilis ]
ಲಿಂಪೋಗ್ರಾನುಲೋಮ ವೇನೇರಿಯಂ [Lymphogranuloma Venereum ]
ಷಾಂಕ್ರಾಯಿಡ್ [Chancroid ]
೨. ಚರ್ಮದ ಮೇಲೆ ಕಾಣುವ ಕಾಯಿಲೆಗಳು
ಲೈಂಗಿಕ ನರೂಲಿ ಅಥವಾ ನರೆಹುಲಿ [Genital Warts ]
೩. ಗೋನೋಕಾಕ್ಕಲ್ ಕಾಯಿಲೆಗಳು; ಗನೋರಿಯಾ [Gonorrhea ]
೪. ಕ್ಲಾಮಿಡಿಯಾ ಕಾಯಿಲೆಗಳು
೫. ಹೊರ ಪರ ಪಿಂಡಿಕ [Parasitic ]
   ಗುಂಜಲುವಿನ ಹೇನು [pubic lice] ಕಜ್ಜಿ [ Scabies ]
೬. ಚಲ್ಕಣಬೇನೆ [AMOEBIASIS]
೭. ಯೋನಿಯ ಉರಿಯೂತಗಳು
    ಟ್ರ್ಕೋಮೊನಿಯಾಸ್ [Trichomoniasis ]
    ಹುದುಗು [vaginal Yeast infections ]
೮. ಕಿಳ್ಗುಳಿಯ ಉರಿಯೂತ [pelvic inflammatory Disease ]

30.HIV ಸೋಂಕಿನ ಲಕ್ಷಣಗಳು ಯಾವುವು? ತಿಳಿಸಿ.

ಪ್ರಾರಂಭದಲ್ಲಿ ಮೆಲ್ನೋಟಕ್ಕೆ ಯಾವ ರೋಗಲಕ್ಷಣಗಳೂ ಗೋಚರಿಸುವುದಿಲ್ಲ. ಕ್ರಮೇಣ ಸಣ್ಣಪುಟ್ಟ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಗ್ರಂಥಿ ಜ್ವರ [ಗಡ್ಡೆ ಜ್ವರ ] ಬರಬಹುದು. ಬಿಳಿರಕ್ತ ಕಣಗಳು ಸಹಜವಾಗಿಯೇ ಅಪರಿಚಿತ HIV ವೈರಾಣುಗಳ ಮೇಲೆ ದಾಳಿ ಮಾಡಲು ಆಂಟಿಬಾಡಿಗಳನ್ನು ತಯಾರಿಸುತ್ತವೆ. ಆದರೆ HIV ವೈರಾಣುಗಳು ಆಂಟಿಬಾಡಿಗಳನ್ನು ನಾಶಪಡಿಸಿ ದೇಹದ ರೋಗನಿರೋಧಕ ಶಕ್ತಿಯನ್ನು ನಾಶಪಡಿಸುತ್ತವೆ ಪರಿಣಾಮವಾಗಿ ಅನೇಕ ತರದ ರೋಗಗಳು ದೇಹವನ್ನು ಆಕ್ರಮಿಸಿಬಿಡುತ್ತವೆ. ದೇಹ ನಲುಗಿಬಿಡುತ್ತದೆ.

ಮುಖ್ಯಲಕ್ಷಣಗಳು

೧. ಯಾವುದೇ ಕಾರಣವಿಲ್ಲದೆ ದೇಹದ ತೂಕ ಮೊದಲಿಗಿಂತಲೂ ಶೇ. ಹತ್ತರಷ್ಟು ಕಡಿಮೆಯಾಗುವುದು.
೨.ಜ್ವರ-ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಇರುವುದು.
೩.ನಿರಂತರವಾಗಿ ಇಲ್ಲವೇ ಪದೇ ಪದೇ ತಿಂಗಳಿಗಿಂತಲೂ ಹೆಚ್ಚು ಕಾಲ ಅತಿಭೇದಿಯಾಗುವುದು.
೪. ಸದಾ ಸುಸ್ತಾಗುತ್ತಿರುವುದು.

ಉಪಲಕ್ಷಣಗಳು

೧. ತಿಂಗಳಿಗಿಂತಲೂ ಹೆಚ್ಚಾಗಿ ಕೆಮ್ಮು ಇರುವುದು.
೨. ತುರಿಕೆಯಿಂದ ಕೂಡಿದ ಚರ್ಮದ ಮೇಲಿನ ಗಂಧೆಗಳು.
೩. ಮೈ ತುಂಬಾ ಹುಣ್ಣಾಗುವಿಕೆ.
೪. ಹರ್ಪಿಸ್ ಕಾಯಿಲೆ.
೫. ಬಾಯಿ ಮತ್ತು ಅನ್ನ ನಾಳದಲ್ಲಿ ಬಿಳಿಕಲೆ ಅಥವಾ ಹುಣ್ಣಾಗುವುದು.
೬. ತೊಡೆಸಂದನ್ನು ಬಿಟ್ಟು ದೇಹದ ಉಳಿದ ಭಾಗಗಳಲ್ಲಿ ಎರಡು ಅಥವಾ ಮೂರು ಕಡೆಗಳಲ್ಲಿ ಸ್ಪರ್ಶಕ್ಕೆ ಸಿಕ್ಕುವಂತೆ ಗ್ರಂಥಿ [ಗಡ್ಡೆ ] ಗಳು ಮೂಡಿಕೊಳ್ಳುವುದು.
ಇದಲ್ಲದೆ ಶ್ವಾಸಕೋಶದ ಸೋಂಕುಗಳಿಂದ ಉಂಟಾಗುವ ನ್ಯೂಮೋನಿಯಾ ಮತ್ತು ಉಸಿರಾಟದ ತೊಂದರೆಗಳು ಹಾಗು ಕ್ಷಯದ ಸೋಂಕು ಸಾಮಾನ್ಯ. ಮಿದುಳಿಗೆ ಸೋಂಕು ತಗಲುವುದರಿಂದ ತಲೆನೋವು, ಮೆದುಳು ಜ್ವರ ಹಾಗೂ ಇತರ ಮಾನಸಿಕ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಲ್ಲದೆ ಸೋಂಕಿನಿಂದ ಅನೇಕ ದಿನಗಳ ಪರ್ಯಂತ ತೀವ್ರವಾದ ಭೇದಿ ಕಾಣಿಸಿಕೊಳ್ಳಬಹುದು.ಮೇಲಿನ ಮುಖ್ಯ ಲಕ್ಷಣಗಳಲ್ಲಿ ಎರಡಕ್ಕಿಂತ ಹೆಚ್ಚು ಮತ್ತು ಉಪಲಕ್ಷಣಗಳಲ್ಲಿ ಒಂದಾದರು ಕಾಣಿಸಿಕೊಂಡರೆ H.IV ಸೋಂಕಿನ ಪತ್ತ್ಗಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯ.

31.ಏಡ್ಸ್ ಕಾಯಿಲೆ [AIDS] ಎಂದರೇನು? ತಿಳಿಸಿ.

AIDS ಅಂದರೆ Acquired Immuno Deficiency Syndrome. ಇದನ್ನು ಕನ್ನಡದಲ್ಲಿ ’ಅರ್ಜಿತ ರೋಗ ನಿರೋಧಕ ಶಕ್ತಿ ಕುಂದುವಿಕೆಯ ಲಕ್ಷಣ ಕೂಟ’ ಎನ್ನಬಹುದು.
ಮನುಷ್ಯನ ದೇಹದಲ್ಲಿ ರೋಗಾಣುಗಳಿಂದ ರಕ್ಷಿಸಿಕೊಳ್ಳುವ ನಿಸರ್ಗದತ್ತವಾದ ರಕ್ಷಣಾ ವ್ಯವಸ್ಥೆಯಿದೆ. ಇದನ್ನು ಮಾಡುವುದು ನಮ್ಮ ದೇಹದಲ್ಲಿರುವ ಬಿಳಿ ರಕ್ತ ಕಣಗಳು. ಅವುಗಳು ನಮ್ಮ ದೇಹಕ್ಕೆ ಯಾವುದಾದರೂ ವಿಷಾಣುಗಳು ಪ್ರವೇಶಿಸಿದೊಡನೆಯೇ ರಕ್ಷಣಾತ್ಮಕವಾಗಿ ಪ್ರತಿವಿಷಗಳನ್ನು ಅಂದರೆ ಆಂಟಿಬಾಡೀಸ್ [Antibodies ]ಗಳನ್ನು ಉತ್ಪತ್ತಿ ಮಾಡುತ್ತವೆ. ಉತ್ಪತ್ತಿಯಾದ ಆಂಟಿಬಾಡಿಗಳು ವಿಷಾಣುಗಳನ್ನು ಸುತ್ತುವರಿದು ಅವುಗಳನ್ನು ನಾಶಪಡಿಸುತ್ತವೆ. ಇದೇ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ.
H.I.V ವಿಷಾಣುಗಳು ದೇಹವನ್ನು ಪ್ರವೇಶಿಸಿ ಈ ರೋಗ ನಿರೋಧಕ ರಕ್ಷಣಾ ವ್ಯವಸ್ಥೆಯನ್ನೇ ನಾಶ ಪಡಿಸುತ್ತದೆ. ಅಂದರೆ ಅದು ಬಿಳಿ ರಕ್ತ ಕಣಗಳನ್ನು ನಾಶಪಡಿಸುತ್ತಾ ಹೋಗುತ್ತದೆ. ಬಿಳಿ ರಕ್ತ ಕಣಗಳ ಸಂಖ್ಯೆ ಇಳಿಮುಖವಾಗುತ್ತಾ ಹೋದಂತೆ ಹಲವಾರು ಖ್ಯಿಲೆಗಳಿಗೆ ದೇಹ ತುತ್ತಾಗುತ್ತದೆ. ಇಂತಹ ಸ್ಥಿತಿಯನ್ನೇ ಏಡ್ಸ್ ರೋಗ ಎನ್ನುತ್ತಾರೆ.
ಇದೊಂದು ವೈರಸ್ ಕಾಯಿಲೆ. ಇದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವುದರಿಂದ ಇದನ್ನು Human Immuno Deficiency Virus-H.I.V ಎಂದು ಕರೆಯಲಾಗಿದೆ. ಇವು ರಿಟ್ರೋ ವೈರಸ್ ಎಂಬ ಗುಂಪಿಗೆ ಸೇರಿದ ಅತೀ ಸೂಕ್ಷಾಣು ಜೀವಿಗಳು. ನಮ್ಮ ಜೀವ ಕಣದಲ್ಲಿ R.N.A ಮತ್ತು D.N.A ಎಂಬ ಅಂಶಗಳಿರುತ್ತವೆ. ಆದರೆ H.I.V ವೈರಸ್ ನಲ್ಲಿ R.N.A ಮಾತ್ರ ಇರುತ್ತದೆ. ಈ ಜೀವಿ ದೇಹದ ರಕ್ತ, ವೀರ್ಯ ಇಲ್ಲವೇ ಯೋನಿಸ್ರಾವದಲ್ಲಿ ಮಾತ್ರ ಇರುತ್ತದೆ. ಯೋನಿಸ್ರಾವಕ್ಕಿಂತಲೂ ಪುರುಷನ ಧಾತುವಿನಲ್ಲಿ ವೈರಸ್ ಗಳು ಅಧಿಕವಾಗಿ ಕೇಂದ್ರಿಕೃತವಾಗಿರುವುದು ಗೊತ್ತಾಗಿದೆ.

                           32.ನಿಮ್ಮ ದೃಷ್ಟಿಯಲ್ಲಿ ಪ್ರೀತಿ ಎಂದರೇನು? ತಿಳಿಸಿ

ಪ್ರೀತಿ ಎನ್ನುವುದು ಒಂದು ಅನುಭೂತಿ; ಮಧುರವಾದ ಅನುಭವ. ಸುಪ್ರಸಿದ್ಧ ದಾರ್ಶನಿಕ ಜೆ. ಕೃಷ್ಣಮೂರ್ತಿ ಪ್ರೀತಿಯನ್ನು ನದಿಗೆ ಹೋಲಿಸಿದ್ದಾರೆ. ಅವರು ಹೇಳುತ್ತಾರೆ; ’ಹರಿವೆಡೆಯಲೆಲ್ಲಾ ನದಿ ಜೀವ ತುಂಬುತ್ತದೆ.ಮಲಿನವಾದರೂ, ಮಾರು ಕ್ರಮಿಸುವಷ್ಟರಲ್ಲಿ ತಿಳಿಗೊಂಡು ಸಾಗುತ್ತದೆ. ಒಳಿತು, ಕೆಡುಕು, ಸೌಂದರ್ಯ, ಕುರೂಪ ಎಲ್ಲಾ ಅದರಲ್ಲಿ ಕರಗುತ್ತದೆ. ಪ್ರೀತಿ; ತನ್ನೊಳಗೆ ತಾನೇ ಪರಿಪೂರ್ಣ.’
ವಾಸ್ತವಿಕ ನೆಲೆಯಲ್ಲಿ ನಿಂತು ಪ್ರೀತಿಯನ್ನು ನೋಡಿದರೆ ಅದಕ್ಕೆ ಹಲವಾರು ಆಯಾಮಗಳಿವೆ. ಪ್ರೀತಿ ಎನ್ನುವುದು ಪ್ರತಿ ಮನುಷ್ಯನ ಮನಸ್ಸಿನಾಳದಲ್ಲಿರುವ ಮೂಲ ಭಾವನೆ. ಅದು ನೆಲದಾಳದಲ್ಲಿರುವ ಜೀವಜಲದಂತೆ. ಎಲ್ಲರಿಗೂ ಅದು ಬೇಕು. ಮನದಾಳದಲ್ಲಿ ಸ್ಥಾಯಿ ಭಾವವಾಗಿರುವ ಪ್ರೀತಿ ಹಲವಾರು ವಿಧಗಳಲ್ಲಿ ಪ್ರಕಟಗೊಳ್ಳುತ್ತದೆ.
ಗಂಡು ಹೆಣ್ಣು ಸಮಾನ ನೆಲೆಯಲ್ಲಿ ನಿಂತು ಪ್ರೀತಿಯನ್ನು ನೋಡಿದರೆ, ಅನುಭವಿಸಿದರೆ, ಅದು ಪ್ರೇಮವಾಗಿ ಸ್ನೇಹವಾಗಿ,ಅನುರಾಗವಾಗಿ, ನಂಬಿಕೆ, ವಿಶ್ವಾಸಗಳಾಗಿ ಪ್ರಕಟವಾಗಬಹುದು.
ಪ್ರೀತಿಯ ಸಮಾನ ನೆಲೆಯಿಂದ ಒಂದು ಮೆಟ್ಟಿಲು ಮೇಲಕ್ಕೆ ಹೋದರೆ ಅದು ಭಕ್ತಿಯಾಗಿ, ಗೌರವವಾಗಿ, ಮೋಕ್ಷದ ಹಂಬಲವಾಗಿ ಮಾರ್ಪಾಡಾಗಬಹುದು.
ಹಾಗೆಯೇ ಒಂದು ಮೆಟ್ಟಿಲು ಕೆಳಗಿಳಿದು ಬಂದರೆ ಮಮತೆ, ಕರುಣೆ, ಅಕ್ಕರೆ,ವಾತ್ಸಲ್ಯ, ಜೀವ ದಯೆಗಳಾಗಿ ಹರಿಯಬಹುದು.
ಒಟ್ಟಿನಲ್ಲಿ ಪ್ರೀತಿಯೆಂಬುದು ಜೀವ-ಜೀವಗಳನ್ನು ಬೆಸೆಯುವ ಒಂದು ಅಪೂರ್ವ ಶಕ್ತಿ.

33.ಲೈಂಗಿಕ ಆಪ್ತ ಸಮಾಲೋಚನೆ ಎಂದರೇನು? ಸಂಕ್ಷಿಪ್ತವಾಗಿ ತಿಳಿಸಿ

ಆಪ್ತ ಸಮಾಲೋಚನೆ ಎಂಬ ಶಬ್ದದಲ್ಲೇ ಅಡಗಿದೆ ಅದರ ಅರ್ಥ. ಅಂದರೆ ಇಬ್ಬರು ವ್ಯಕ್ತಿಗಳು ಆಪ್ತವಾದ, ನಂಬುಗೆಯ ವಾತಾವರಣದಲ್ಲಿ, ಪರಸ್ಪರ ಮುಕ್ತವಾಗಿ ಮಾತಾಡುತ್ತಾ, ಗಹನವಾದ ವಿಷಯವೊಂದರ ಆಳಕ್ಕೆ ಇಳಿಯುವುದು. ಮತ್ತು ಅದಕ್ಕೆ ಸಂಬಂದಪಟ್ಟ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು.
ಲೈಂಗಿಕ ಆಪ್ತ ಸಮಾಲೋಚನೆಯೆಂದರೆ ಅದೊಂಥರಾ ಗುಪ್ತ ಸಮಾಲೋಚನೆ. ಯಾಕೆಂದರೆ ನಮ್ಮ ಭಾರತೀಯ ಸಮಾಜದಲ್ಲಿ  ಲೈಂಗಿಕ ಸಮಸ್ಯೆಗಳನ್ನು ಮುಕ್ತವಾಗಿ ಮಾತಾಡುವ, ಚರ್ಚಿಸುವ ವಾತಾವರಣ ಇಲ್ಲ. ಹಾಗಾಗಿ ಅನೇಕ ದಾಂಪತ್ಯಗಳು ಮುರಿದು ಬೀಳುತ್ತಿವೆ, ಇಲ್ಲವೇ ನರಳುತ್ತಿವೆ. ಅದು ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ಮೊಕದ್ದಮೆಗಳಲ್ಲಿ, ಮ್ಯಾರೇಜ್ ಕೌನ್ಸಿಲರ್ ಗಳ ಅನುಭವದ ನುಡಿಗಳಲ್ಲಿ ವ್ಯಕ್ತವಾಗುತ್ತಿದೆ. ಹಾಗಾಗಿ ಇಲ್ಲಿ ಲೈಂಗಿಕ ಆಪ್ತ ಸಮಾಲೋಚಕರ ಅಗತ್ಯತೆ ತುಂಬಾ ಇದೆ.

ಆಪ್ತ ಸಮಾಲೋಚಕರಿಗಿಂತಲೂ ಲೈಂಗಿಕ ಆಪ್ತ ಸಮಾಲೋಚಕರ ಜವಾಬ್ದಾರಿ ಹೆಚ್ಚು. ಸಮಾಜದ ದೃಷ್ಟಿಯಲ್ಲಿ ನಿಷಿದ್ಧವಾದ, ಅತ್ಯಂತ ಖಾಸಗಿಯಾದ ವಿಚಾರವೊಂದನ್ನು ಹೇಳಿಕೊಳ್ಳಲು, ಮತ್ತು ಅದಕ್ಕೆ ಸೂಕ್ತ ಪರಿಹಾರವೊಂದನ್ನು ಪಡೆದುಕೊಳ್ಳಲು ಎದುರಿಗಿರುವ ವ್ಯಕ್ತಿ ಬಂದಿದ್ದಾನೆ. ಹಾಗಾಗಿ ತಾನು ಬಲು ಎಚ್ಚರದಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬ ಅರಿವು ಪ್ರತಿ ಕೌನ್ಸಿಲರ್ ನಲ್ಲಿರಬೇಕು. ಅವರು ಹೇಳಿದನ್ನು ಸಹಾನುಭೂತಿಯಿಂದ, ಅಸ್ಥೆಯಿಂದ, ಕಾಳಜಿಯಿಂದ ಕೇಳಿಸಿಕೊಳ್ಳ್ವ ತಾಳ್ಮ ಇರಬೇಕು.
ಗಂಡು ಹೆಣ್ಣಿನ ದೇಹ ರಚನೆಯ ಬಗ್ಗೆ, ಲೈಂಗಿಕಾಂಗಳ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಉದ್ದೀಪನಗೊಳಿಸಿ, ಕ್ರಿಯಶೀಲಗೊಳಿಸಿ ಆನಂದವನ್ನು ಹೊಂದಬೇಕು ಎಂಬುದನ್ನು ವಿಡಿಯೋ ಈಳ್ಳಾಎ ಚಿತ್ರ ಸಮೇತ ವಿವರಿಸಿ ಹೇಳಿದರೂ ಸಾಕು ಮುಕ್ಕಾಲು ಪಾಲು ಸಮಸ್ಯೆಗಳು ಆಪ್ತ ಸಮಾಲೋಚನೆಯಲ್ಲೇ ಪರಿಹಾರವಾಗುತ್ತವೆ. ಉಳಿದವುಗಳಿಗೆ ತಜ್ನ ವೈದ್ಯರ ಬಳಿ ತೆರಳುವಂತೆ ಶಿಫಾರಸ್ ಮಾಡಬಹುದು. 
ಗೈನಾಕಾಲಿಜಿಸ್ಟ್, ಯೂರಾಲಾಜಿಸ್ಟ್, ಆಂಡ್ರಾಲಾಜಿಸ್ಟ್, ಸೈಕಾಲಾಜಿಸ್ಟ್ ಸೇರಿದಂತೆ ಪರಿಣಿತ ವೈದ್ಯರ ಸಂಪರ್ಕದಲ್ಲಿ ಸದಾ ಲೈಂಗಿಕ ಆಪ್ತ ಸಮಾಲೋಚಕರಿರಬೇಕು. ಯಾಕೆಂದರೆ ಲೈಂಗಿಕ ಕೇಂದ್ರವಿರುವುದು ಮಿದುಳಿನಲ್ಲಿ. ಹಾಗಾಗಿ ಲೈಂಗಿಕ ಸಮಸ್ಯೆಗಳು ಬಹಳಷ್ಟು ಭಾರಿ ಮಾನಸಿಕವೂ ಹೌದು, ಶಾರೀರಿಕವೂ ಹೌದು.

[ಇವು ಲೈಂಗಿಕ ಆಪ್ತ ಸಮಾಲೋಚಕರ ಪರೀಕ್ಷೆಯಲ್ಲಿ ಕೇಳಲಾದ ಪ್ರಶೆಗಳಿಗೆ ನಾನು ಬರೆದ ಉತ್ತರಗಳು. ಇದು ನೂರು ಮಾರ್ಕಿನ ಪ್ರಶ್ನೆಗಳು. ಇನ್ನೂ ೫೦೦ ಮಾರ್ಕಿನ ಪ್ರಶ್ನೆಗಳಿವೆ. ನಿಮ್ಮಿಂದ ಬರುವ ಪ್ರತಿಕ್ರಿಯೆಗಳನ್ನು ಗಮನಿಸಿಕೊಂಡು ಮುಂದೆ ಅವುಗಳನ್ನು ಪೋಸ್ಟ್ ಮಾಡುವ ಬಗ್ಗೆ ಯೋಚಿಸುತ್ತೇನೆ ]

 

 

 

          

 







Thursday 2 June 2011

ಮೈ ಮನಗಳ ಸುಳಿಯಲ್ಲಿ



ಶಿವರಾಮ ಕಾರಂತರ ’ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯ ನಾಯಕಿ ಮಂಜುಳ ವೃತ್ತಿಯಿಂದ ಪರಂಪರಾಗತ ವೇಶ್ಯೆಯಾದರೂ ಸಂಸ್ಕಾರವಂತ ಹೆಣ್ಣುಮಗಳು. ಅವಳು ಒಂದೆಡೆ ಹೇಳುತ್ತಾಳೆ, ’ಪ್ರಣಯದಲ್ಲಿ ಗಂಡು ಹೆಣ್ಣು ಇಬ್ಬರೂ ಯಾಚಕರೇ! ಬಿಕ್ಷೆ ನೀಡುವವರೂ ಪರಸ್ಪರ ಅವರೇ.ಇಲ್ಲಿ ಒಬ್ಬರು ಕೀಳಲ್ಲ; ಇನ್ನೊಬ್ಬರು ಮೇಲಲ್ಲ.’

ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯೊಬ್ಬ  ಮೋಹಪರವಶನಾಗಿ ಮಂಜುಳೆಯ ಬಳಿ ಬರುತ್ತಾನೆ. ಆತನ ದೇಹ ಅವಳಿಗೆ ಒಂದು ಹೊಸ ವೀಣೆಯಂತೆ ಭಾಸವಾಗುತ್ತದೆ. ಆಕೆಯೇ ತಂತಿಯ ಬಿರಡೆ ಬಿಗಿದು ಶ್ರುತಿಗೆ ಅಣಿಗೊಳಿಸುತ್ತಾಳೆ.
ಆತ ಅನನುಭವಿ. ಅದನ್ನು ಆಕೆ ಹೀಗೆ ವರ್ಣಿಸುತ್ತಾಳೆ; ’ನನ್ನ ಕೈಗೆ ಬಂದ ಆ ಕೋಮಲವೂ ಅಲ್ಲದ ದೇಹದಲ್ಲಿ ಎಲ್ಲೆಲ್ಲಿ ಧ್ವನಿ ಹೊರಡಿಸುವ ಮೆಟ್ಟಿಲುಗಳು ನಿಂತಿವೆ, ಯಾವಲ್ಲಿ ಮೀಂಟಿದರೆ ನನ್ನ ಆಸೆಗೆ ತಣಿವಾದೀತು-ಎಂದು ಅರಸಿ, ನುಡಿಸಿ, ನಲಿದೆ.ಅದೊಂದು ಮಾನವ ದೇಹವೇ ಅನಿಸಲಿಲ್ಲ ನನ್ನ ಪಾಲಿಗೆ;ನಿಜಕ್ಕೂ ಒಂದು ವೀಣೆ ಅನಿಸಿತು! ಒಂದೊಂದು ಮಿಡಿತವೂ ನನ್ನ ಕಿವಿಯನ್ನು ನಾದದಿಂದ ತುಂಬಿ ನಲಿಸಿತು. ಅವರ ಯಾವ ಮಾತೂ ನನಗೆ ಬೇಕೆನಿಸಲಿಲ್ಲ. ನನ್ನ ಮೈಯೆಲ್ಲವೂ ನಾಲಿಗೆಯಾಗಿತ್ತು.; ಅದೇ ಕಿವಿಯಾಗಿತ್ತು. ಅವರ ಪಾಲಿಗೆ ನನ್ನ ದೇಹ ಹೇಗೆನಿಸಿತೋ ಹೇಳಲಾರೆ. ನನಗದು ರಸದೂಟವಾಗಿತ್ತು. ಆ ವೀಣೆ ನನಗೆ ಒಲಿದಂತೆ,ನಾನು ಸಹ ಒಲಿದಿರಲಾರೆನೇ? ಆ ಘಳಿಗೆಯು ಬಂದಾಗ ನಾನು ನಾನಾಗಿರಲಿಲ್ಲ. ಕಡಲಲ್ಲಿ ಕರಗಿದ ಒಂದು ಉಪ್ಪಿನ ಗೊಂಬೆಯಾಗಿದ್ದೆ'
ಸಾಮಾನ್ಯ ಸಂದರ್ಭಗಳಲ್ಲಿ ಮನಸ್ಸೇ ಬೇರೆಯಾಗಿರುತ್ತದೆ.ದೇಹವೇ ಬೇರೆಯಾಗಿರುತ್ತದೆ. ಅವೆರಡೂ ಅವುಗಳ ಪರಿಮಿತಿಯಲ್ಲೇ ವ್ಯವರಿಸುತ್ತದೆ.ಆದರೆ ಅವೆರಡೂ ಒಂದಾಗಿ ಏಕೀಭವಿಸುವ  ಕ್ಷ್ಣಣವೇ ಗಂಡು ಹೆಣ್ಣಿನ ಮಿಲನ. ಮಂಜುಳೆಗೆ ಅಂದು ಅದು ಸಿದ್ಧಿಸಿತ್ತು.

ದೇಹ ವೀಣೆಯನ್ನು ಮೀಟುವುದೂ ಒಂದು ಕಲೆ. ವೀಣೆಯಲ್ಲಿ ಸ್ವರ ಸ್ಥಾಯಿಗಳನ್ನು ಅಭ್ಯಾಸಿಸಿ ನಾದವನ್ನು ಹೊಮ್ಮಿಸಿ ಭಾವ ಪರವಶವಾದಂತೆ ದೇಹ ವೀಣೆಯಲ್ಲಿ ರಸಸ್ಥಾಯಿಗಳನ್ನು ಗುರುತಿಸಿಕೊಂಡು ಅದನ್ನು ಮೀಟುತ್ತಾ ಬ್ರಹ್ಮಾನಂದವನ್ನು ಹೊಂದಬೇಕು. ಮಂಜುಳೆಯ ಮಿಲನದಲ್ಲಿ ಆ ಆನಂದವನ್ನು ಅನುಭವಿಸಿದ ಆ ಗುರು, ಮಂಜುಳೆಯನ್ನು ಅಪ್ಪಿಕೊಂಡು ಕಣ್ಣೀರು ಸುರಿಸುತ್ತಾ, ’ಸಮಾಧಿ ಸ್ಥಿತಿ ಹೇಗಿದ್ದೀತು ಎಂಬುದನ್ನು ತೋರಿಸಿದ ಗುರು ನೀನು’ ಎಂದು ಭಾವಪರವಶವಾಗುತ್ತಾರೆ.

ನಿಸರ್ಗವೇ ಗಂಡು ಹೆಣ್ಣಿನ ದೇಹಗಳನ್ನು ಅಪೂರ್ಣವಾಗಿ ಸೃಷ್ಟಿಸಿದೆ. ಅವು ಪರಸ್ಪರ ಪೂರ್ಣತ್ವಕ್ಕಾಗಿ ತುಡಿಯುತ್ತವೆ. ಪೂರ್ಣತ್ವದೆಡೆಗಿನ ಪಯಣದ ಹಾದಿ ಸುಗಮವಾಗಬೇಕಾದರೆ ಆ ಹಾದಿಯ ಪೂರ್ವ ಪರಿಚಯವನ್ನು ಸ್ವಲ್ಪ ಮಟ್ಟಿಗಾದರೂ ಮಾಡಿಕೊಳ್ಳಬೇಕು. ಆ ಪ್ರಯತ್ನವೇ ’ದೇಹವೀಣೆ’”
’ದೇಹ ವೀಣೆ’ ಕೇವಲ ಲೈಂಗಿಕ ಸಮಸ್ಯೆಗಳಿಗೆ ಮಾತ್ರ ಸ್ಪಂದಿಸುವುದಿಲ್ಲ. ಯಾಕೆಂದರೆ ದೇಹ ವೀಣೆಯನ್ನು ಮೀಟಿದಾಗ ಅನೇಕ ಭಾವಗಳು ಹೊರಹೊಮ್ಮುತ್ತವೆ; ಪ್ರೀತಿ, ಭಯ, ಸಂತೋಷ, ತೃಪ್ತಿ, ಅನುರಾಗ, ಒಲುಮೆ ಮುಂತಾದ ಮೃದು ಭಾವನೆಗಳು ಸಂಚಲನಗೊಳ್ಳಬಹುದು. ಹಾಗೆಯೇ ಕೋಪ, ದ್ವೇಷ, ಕ್ರೌರ್ಯದಂಥ ರೂಕ್ಷ ಭಾವನೆಗಳು ಜಾಗೃತಗೊಳ್ಳಬಹುದು. ಅದನ್ನೆಲ್ಲಾ  ನಿಗ್ರಹಿಸಲಾರದೆ ಮನಸ್ಸು ದಣಿದುಹೋಗಬಹುದು.ಅಂಥ ಭಾವನೆಗಳ ತಾಕಲಾಟದಲ್ಲಿ ಹಲವರು ಬದುಕಿನ ಭರವಸೆಯನ್ನೇ ಕಳೆದುಕೊಳ್ಳಬಹುದು. ಅಂಥವರು ;ದೇಹ ವೀಣೆ’ಯಲ್ಲಿ ಬಂದು ತಮ್ಮ ದುಃಖವನ್ನು ಹೇಳಿಕೊಂಡು ಸಾಂತ್ವನವನ್ನು ಪಡೆಯುವ ಪ್ರಯತ್ನ ಮಾಡಬಹುದು.

’ದೇಹವೀಣೆ’ ಸಂವಾದದ ಮಾದರಿಯಲ್ಲಿರುತ್ತದೆ. ಓದುಗರ ಸಂದೇಹ, ಆತಂಕ, ಚಿಂತೆ, ವ್ಯಾಕುಲತೆ ಇತ್ಯಾದಿ ಮನೋಗ್ಲಾನಿಗಳಿಗೆ ಸಮಾಧಾನವನ್ನು ನೀಡುವ ಪ್ರಯತ್ನವನ್ನು ಇದು ಮಾಡುತ್ತದೆ.
ತುಂಬಾ ಜವಾಬ್ದಾರಿಯನ್ನು ಬೇಡುವ ಇಂಥದೊಂದು ಬ್ಲಾಗ್ ನಡೆಸಲು ನಿನಗಿರುವ ಯೋಗ್ಯತೆ ಏನು ಎಂದು ನೀವು ಕೇಳಬಹುದು.  ನನಗೆ ಗೊತ್ತಿದೆ; ಇದು ತುಂಬಾ ರಿಸ್ಕ್. ಈ ರಿಸ್ಕ್ ತೆಗೆದುಕೊಳ್ಳಲು ನಾನು ಸಿದ್ಧವಾಗಿದ್ದೇನೆ. ನಾನು ಮೆಂಟಲ್ ಹೆಲ್ತ್ ಆಪ್ತ ಸಮಾಲೋಚನೆಯಲ್ಲಿ ಡಿಪ್ಲೋಮಾ ಮಾಡಿದ್ದೇನೆ. ಇದೀಗ ’ಲೈಂಗಿಕ ಸಮಸ್ಯೆಗಳು’ ಎಂಬ ವಿಷಯದಲ್ಲಿ ಆಪ್ತ ಸಮಾಲೋಚನೆ ತರಬೇತಿ ಪಡೆಯುತ್ತಿದ್ದೇನೆ. ಅಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ವೈವಿಧ್ಯತೆಯನ್ನು ಕಂಡು, ಕೇಳಿ ಬೆರಗಾಗಿದ್ದೇನೆ. ಅದರ ಹಿನ್ನೆಲೆಯಲ್ಲಿ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ. ನನ್ನೊಡನೆ ಪರಿಣಿತರ ತಂಡವಿದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಲೈಂಗಿಕ ಶಿಕ್ಷಣವನ್ನು ತಿಳಿಸುವ, ಹೇಳುವ ಎಲ್.ಕೆ.ಜಿ ಕ್ಲಾಸ್. ಲೈಂಗಿಕ ಶಿಕ್ಷಣ ಎಂದರೆ ಗಂಡು ಹೆಣ್ಣಿನ ಮಿಲನವನ್ನು ಹಸಿ ಹಸಿಯಾಗಿ ಹೇಳುವುದು ಎಂದು ಅನೇಕರು ತಿಳಿದಿದ್ದಾರೆ. ಅದಕ್ಕಾಗಿಯೇ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡುತ್ತೇವೆಂದು ಸರಕಾರ ಅಂದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ತಪ್ಪು. ಲೈಂಗಿಕ ಶಿಕ್ಷಣವೆಂದರೆ ಸ್ತೀ ಮತ್ತು ಪುರುಷ ದೇಹ ರಚನೆಗಳನ್ನು ತಿಳಿಸಿಕೊಡುವುದು. ಒಂದು ರೀತಿಯಲ್ಲಿ ಇದು ಬಯಾಲಾಜಿಯ ಕ್ಲಾಸಿದ್ದಂತೆ. ಪರಸ್ಪರ ಆಕರ್ಷಣೆ ಮತ್ತು ಅದರಿಂದಾಗುವ ತೊಂದರೆಗಳು, ಅದಕ್ಕಿರುವ ನಿವಾರಣೋಪಾಯಗಳ ಬಗೆಗೆ ತಿಳಿಸಿಕೊಡುವುದೇ ಲೈಂಗಿಕ ಶಿಕ್ಷಣದ ಉದ್ದೇಶವಾಗಿದೆ.
ಮೇಲಿನ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಈ ಬ್ಲಾಗನ್ನು ಆರಂಭಿಸಲಾಗಿದೆ. ಇದನ್ನು ಆರೋಗ್ಯಕಾರಿಯಾಗಿ ಮುನ್ನಡೆಸುವ ಜವಾಬ್ದಾರಿಯಲ್ಲಿ ನಿಮ್ಮ ಪಾಲು ಬಹು ದೊಡ್ಡದು. ಬನ್ನಿ, ನಿಮ್ಮ ಸಲಹೆ, ಸಂದೇಹಗಳನ್ನು ನಮ್ಮೊಡನೆ ಹಂಚಿಕೊಳ್ಳಿ; ಸಂವಾದದಲ್ಲಿ ಭಾಗವಹಿಸಿ. ನಿಮ್ಮ ಸಂದೇಹಗಳಿಗೆ ನಮ್ಮ ಪರಿಣಿತ ಪಡೆಯ ಸಹಾಯದಿಂದ ಉತ್ತರಿಸುವ ಪ್ರಯತ್ನ ಮಾಡಲಾಗುವುದು.

ಒಬ್ಬ ಗೈನಕಾಲಾಜಿಸ್ಟ್, ಒಬ್ಬ ಯೂರಲಾಜಿಸ್ಟ್, ಇನ್ನೊಬ್ಬ ನರರೋಗತಜ್ನ ಹಾಗು ಒಬ್ಬ ಸೈಕಾಲಾಜಿಸ್ಟ್- ಇಷ್ಟು ಜನರ ತಂಡವೇ ಸಾಕು ನಿಮ್ಮ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಲು. ಅ ತಂಡದ ಸಂಪರ್ಕ ನನಗಿದೆ. ಆದರೆ ದಯವಿಟ್ಟು ’ದೇಹವೀಣೆ’ಯನ್ನು ’ಅಟ್ಟದ ಮೇಲಿನ ಡಾಕ್ಟರ್’ ಎಂದು ಭಾವಿಸಬೇಡಿ. ಸ್ವಸ್ಥ ಸಮಾಜದ ಸೃಷ್ಟಿಗೆ ಅರೋಗ್ಯವಂತ ಮನಸ್ಸುಗಳ ಅವಶ್ಯಕತೆ ತುಂಬಾ ಇದೆ. ಅದನ್ನು ನಾವೆಲ್ಲಾ ಸೇರಿಯೇ ಕಟ್ಟುವ ಪ್ರಯತ್ನ ಮಾಡೋಣ.